ಕುಂದಾಪುರ, ಡಿ 14 (DaijiworldNews/DB): ಭಾರತದ ಮಹಿಳೆಯರು ಸುರಕ್ಷಿತವಾಗಿದ್ದಾರೆ ಎನ್ನುವ ಸಂದೇಶವನ್ನು ವಿಶ್ವಕ್ಕೆ ಸಾರಬೇಕು ಎನ್ನುವ ಗುರಿಯೊಂದಿಗೆ ಮಧ್ಯಪ್ರದೇಶದ ರಾಜಗಢ ಜಿಲ್ಲೆಯ ಆಶಾ ಮಾಲ್ವಿ ಎಂಬ ಯುವತಿ ಒಬ್ಬಂಟಿಯಾಗಿ ಸೈಕಲ್ ಯಾತ್ರೆ ಕೈಗೊಂಡಿದ್ದು, ಬುಧವಾರ ಕುಂದಾಫುರ ತಲುಪಿದ್ದಾರೆ.
ಮಧ್ಯಪ್ರದೇಶದ ಭೋಪಾಲ್ನಿಂದ ನವೆಂಬರ್ 1ರಿಂದ ಯಾತ್ರೆ ಆರಂಭಿಸಿರುವ ಯುವತಿ 20 ಸಾವಿರ ಕಿ.ಮೀ ಸೈಕಲ್ ಮೂಲಕ ಪ್ರಯಾಣಿಸುವ ಗುರಿ ಹೊಂದಿದ್ದಾಳೆ. ಈಗಾಗಲೇ ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ ಹಾಗೂ ಗೋವಾ ಮಾರ್ಗವಾಗಿ 3.7 ಸಾವಿರ ಕಿಲೋ ಮೀಟರ್ ಕ್ರಮಿಸಿ ಕರ್ನಾಟಕದ ಪ್ರವೇಶಿಸಿದ್ದಾರೆ.
ಕುಂದಾಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಆಶಾ, ಭಾರತದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಿಂದಾಗಿ ಮಹಿಳೆಯರಿಗೆ ದೇಶದಲ್ಲಿ ಸುರಕ್ಷತೆಯಿಲ್ಲ ಎನ್ನುವ ಅಭಿಪ್ರಾಯ ಮೂಡಿದೆ. ಆದರೆ ಇಲ್ಲಿನ ಮಹಿಳೆಯರು ಸುರಕ್ಷಿತವಾಗಿದ್ದಾರೆ ಎನ್ನುವ ಸಂದೇಶವನ್ನು ವಿಶ್ವಕ್ಕೆ ಸಾರಬೇಕು ಎನ್ನುವ ಗುರಿಯೊಂದಿಗೆ ಸೈಕಲ್ ಯಾತ್ರೆ ಕೈಗೊಂಡಿರುವುದಾಗಿ ತಿಳಿಸಿದರು.
ಪ್ರತಿನಿತ್ಯ ಯಾವ ಸ್ಥಳಕ್ಕೆ ತೆರಳಬೇಕು ಎನ್ನುವ ಗುರಿಯೊಂದಿಗೆ ಸುಮಾರು 70ರಿಂದ 150 ಕಿ.ಮೀವರೆಗೆ ಆಶಾ ಸೈಕಲ್ ತುಳಿಯುತ್ತಾರೆ. ಬಳಿಕ ಅಲ್ಲಿನ ಯಾತ್ರಿ ನಿವಾಸಗಳಲ್ಲಿ ವಸತಿ ಮಾಡಿ ಪ್ರಯಾಣ ಮುಂದುವರಿಸುತ್ತಾರೆ. ಊಟ ತಿಂಡಿ ಎಲ್ಲವೂ ಸ್ವಂತ ಕರ್ಚಿನಲ್ಲಿ ಮಾಡುತ್ತಿದ್ದು, ಕೆಲವರು ಧನಸಹಾಯ ಮಾಡಿದ್ದಾರೆ. ಹೀಗೆ ತೆರಳುವಾಗ ಶಾಲಾ-ಕಾಲೇಜುಗಳಿಗೆ ತೆರಳಿ ದೇಶದಲ್ಲಿ ಮಹಿಳೆಯರು ಸುರಕ್ಷಿತವಾಗಿರುವ ಬಗ್ಗೆ ಮತ್ತು ಮಹಿಳೆಯರ ರಕ್ಷಣೆ ಬಗ್ಗೆ ಭಾರತ ಹೊಂದಿರುವ ಕಾಳಜಿ ಬಗ್ಗೆ ಮಾಹಿತಿ ನೀಡುತ್ತಾರೆ.
ಆಶಾ ತಮ್ಮ ಜಾಗೃತಿ ಯಾತ್ರೆಯನ್ನು ದೆಹಲಿಯಲ್ಲಿ ಪೂರ್ಣಗೊಳಿಸಲಿದ್ದು, ಈ ಸಂದರ್ಭ ಭಾರತದ ರಾಷ್ಟಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗುವ ಇಚ್ಛೆ ಹೊಂದಿರುವುದಾಗಿ ಹೇಳಿದ್ದಾರೆ.