ಕಾರ್ಕಳ, ಡಿ 14 (DaijiworldNews/DB): ಪ್ರತಿಯೊಬ್ಬರಿಗೂ ವಸತಿ ಒದಗಿಸಿಕೊಡಬೇಕು ಎನ್ನುವುದು ಸರಕಾರದ ಆಶಯ. ಸರಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿದಾಗ ಸರಕಾರ ಮೂಲ ಉದ್ದೇಶಗಳು ಸಾಕಾರಗೊಳ್ಳುತ್ತದೆ ಎಂದು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ಕುಮಾರ್ ಹೇಳಿದ್ದಾರೆ.
ಕಾರ್ಕಳ ಪುರಸಭೆ ವತಿಯಿಂದ ಅನಂತಶಯನ ರೋಟರಿ ಬಾಲಭವನದಲ್ಲಿ ಮಂಗಳವಾರ ನಡೆದ ಪ.ಜಾ/ಪ.ಪಂ. ಮತ್ತು ಹಿಂದುಳಿದ ವರ್ಗ ಹಾಗೂ ವಿಶೇಷ ಚೇತನರಿಗೆ ಸಹಾಯಧನದ ಚೆಕ್ ವಿತರಣೆ ಹಾಗೂ 2021-22ನೇ ಸಾಲಿನ ವಾಜಪೇಯಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆಯಡಿ ಮನೆ ನಿರ್ಮಿಸಲು ಮಂಜೂರಾದ ಫಲಾನುಭವಿಗಳಿಗೆ ಕಾರ್ಯಾದೇಶ ಮತ್ತು ಪಿಎಂ ಸ್ವಾನಿಧಿ ಯೋಜನೆಯಡಿ ಮಾರಾಟ ಪ್ರಮಾಣ ಪತ್ರ ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಬಹುಮಹಡಿ ವಸತಿ ಯೋಜನೆಯನ್ನು ಕಾರ್ಕಳದಲ್ಲಿ ಜಾರಿಗೆ ತರಲಾಗುತ್ತಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ರೂಪ ಜಿ. ಶೆಟ್ಟಿ ಮಾತನಾಡಿ, 55 ದಿವ್ಯಾಂಗಚೇತನರಿಗೆ ಸಹಾಯಧನ ಮತ್ತು 75 ಜನರಿಗೆ ಮನೆ ಮಂಜೂರಾತಿ ಪತ್ರ, ಪ್ರಧಾನ ಮಂತ್ರಿ ಸಾಲ ನಿಧಿಯಡಿಯಲ್ಲಿ ಕಿರುಸಾಲ ವಿತರಣೆ ಮತ್ತು ಗುರುತಿನ ಚೀಟಿ ಹಾಗೂ ಶೇ. 24.10ರಲ್ಲಿ ಐವರಿಗೆ ಮನೆ ದುರಸ್ತಿಗೆ ಸಹಾಯಧನವನ್ನು ಈ ಸಂದರ್ಭ ಹಸ್ತಾಂತರಿಸಲಾಗಿದೆ. ಇಬ್ಬರಿಗೆ ಸ್ವ ಉದ್ಯೋಗ ಕೈಗೊಳ್ಳಲು ತಲಾ 50 ಸಾವಿರ ರೂ. ಸಹಾಯಧನ ವಿತರಿಸಿದ್ದೇವೆ ಎಂದು ವಿವರಿಸಿದರು.
ಪುರಸಭೆ ಅಧ್ಯಕ್ಷೆ ಸುಮಾ ಕೇಶವ್, ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ಸ್ಥಾಯಿ ಸಮಿತಿ ಅಧ್ಯಕ್ಷ ಯೋಗೀಶ್ ದೇವಾಡಿಗ, ಪುರಸಭೆ ವಿಪಕ್ಷ ನಾಯಕ ಅಶ್ಪಕ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು. ಪ್ರಭಾಕರ ಶೆಟ್ಟಿ ಕೊಂಡಳ್ಳಿ ನಿರೂಪಿಸಿದರು.