ಉಳ್ಳಾಲ, ಡಿ 14 ( DaijiworldNews/MS): ಯುವಕನೋರ್ವ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಸೈಗೋಳಿ ಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.
ಅಸೈಗೋಳಿ ನಿವಾಸಿ ಜಯರಾಮ್ ಶೆಟ್ಟಿ ಎಂಬವರ ಪುತ್ರ ಅಭಿಲಾಷ್(35) ಆತ್ಮಹತ್ಯೆಗೆ ಶರಣಾದವರು. ಬೆಳಿಗ್ಗೆ ಎಂದಿನಂತೆ ವಾಕಿಂಗ್ ಗೆ ತೆರಳಿದ್ದ ಅಭಿಲಾಷ್ , ವಾಪಸ್ಸಾಗಿ ಮನೆಯಲ್ಲೆ ಇದ್ದರು. ತಾಯಿ ಮದುವೆಗೆಂದು ತೆರಳಿದ್ದ ಸಂದರ್ಭ, ತಂದೆ ಮನೆಯ ಹೊರಗೆ ಕುಳಿತಿದ್ದ ಸಂದರ್ಭ ಅಭಿಲಾಷ್ ಮನೆಯ ಕೋಣೆಯೊಳಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೆಡಿಕಲ್ ರೆಪ್ ಆಗಿದ್ದ ಅಭಿಲಾಷ್ ಒಂದು ತಿಂಗಳಿನಿಂದ ಮನೆಯಲ್ಲೇ ಲ್ಯಾಪ್ ಟಾಪ್ ಮೂಲಕ ಕಾರ್ಯ ನಿರ್ವಹಿಸುತ್ತಿದ್ದರು. ಕಳೆದ ಕೆಲ ತಿಂಗಳಿನಿಂದ ಖಿನ್ನತೆಗೆ ಒಳಗಾಗಿದ್ದ ಅಭಿಲಾಷ್, ಯಾರೊಂದಿಗೂ ಬೆರೆಯುತ್ತಿರಲಿಲ್ಲ. ಪ್ರತಿವರ್ಷವೂ ಶಬರಿಮಲೆ ತೆರಳಲು ಮನೆ ಸಮೀಪದ ಅಯ್ಯಪ್ಪ ಮಂದಿರದಲ್ಲಿ ಮಾಲಾಧಾರಣೆ ನಡೆಸುತ್ತಿದ್ದರು. ಈ ಬಾರಿ ಹೋಗದೇ ಹಾಗೆಯೇ ಉಳಿದಿದ್ದರು.
ತಂದೆ ಜಯರಾಮ್ ಶೆಟ್ಟಿ ವೃತ್ತಿಯಲ್ಲಿ ಟೈಲರ್ ಆಗಿದ್ದು, ಅಸೈಗೋಳಿ ತಮ್ಮ ಅಂಗಡಿಯಿಂದ ಹೊರಬರುತ್ತಿದ್ದ ಸಂದರ್ಭ ಅಪಘಾತಕ್ಕೀಡಾಗಿ ಕೆಲಕಾಲ ಅಸೌಖ್ಯದಿಂದ ಇದ್ದರು. ಇತ್ತೀಚೆಗಷ್ಟೇ ಚೇತರಿಸಿಕೊಂಡು ನಡೆದುಕೊಂಡು ಹೋಗುವ ಹಂತಕ್ಕೆ ತಲುಪಿದ್ದರು.
ಹತ್ಯೆಗೀಡಾಗಿದ್ದ ಕಾರ್ತಿಕ್ ರಾಜ್ ಆಪ್ತನಾಗಿದ್ದ!
2016 , ಅ.22 ರಂದು ಕೊಣಾಜೆ ತಿಬ್ಲಪದವು ಬಳಿ ಪಜೀರು ಸುದರ್ಶನನಗರ ನಿವಾಸಿ ಕಾರ್ತಿಕ್ ರಾಜ್ ಹತ್ಯೆಯಾಗಿತ್ತು. ಅಭಿಲಾಷ್ ಹಾಗೂ ಕಾರ್ತಿಕ್ರಾಜ್ ಇಬ್ಬರೂ ಕೊಣಾಜೆ ಖಾಸಗಿ ಶಾಲೆಯಲ್ಲಿ ಸಹಪಾಠಿಗಳಾಗಿ , ಸ್ನೇಹಿತರೂ ಆಗಿದ್ದರು. ಅಭಿಲಾಷ್ ನಿತ್ಯ ವಾಕಿಂಗ್ ಹೋಗುವ ಸಂದರ್ಭ ಕಾರ್ತಿಕ್ ರಾಜ್ ನನ್ನೂ ಜತೆಗೆ ಕರೆದುಕೊಂಡು ಹೋಗಿ ದೇರಳಕಟ್ಟೆ ಜಿಮ್ ನಲ್ಲಿ ಇಬ್ಬರು ವ್ಯಾಯಾಮ ನಡೆಸುತ್ತಿದ್ದರು. ಕಾರ್ತಿಕ್ ರಾಜ್ ಹತ್ಯೆಯಾದ ದಿನದಂದೂ ಅಭಿಲಾಷ್ ಆತನಿಗಾಗಿ ಕಾದು ಮೊಬೈಲ್ ಸ್ವೀಕರಿಸದೇ ಇದ್ದಾಗ, ಓರ್ವನೇ ದೇರಳಕಟ್ಟೆ ಜಿಮ್ ಸೆಂಟರಿಗೆ ತೆರಳಿದ್ದರು. ಅಂದು ಹತ್ಯಾ ಪ್ರಕರಣ ಬೇಧಿಸುವಲ್ಲಿ ಕೊಣಾಜೆ ಪೊಲೀಸರು ವಿಫಲರಾಗಿದ್ದ ಸಂದರ್ಭ ಆಪ್ತಗೆಳೆಯನಾಗಿದ್ದ ಅಭಿಲಾಷ್ ಅವರನ್ನು ಒಮ್ಮೆ ಪೊಲೀಸರು ವಿಚಾರಣೆಗೆ ಕರೆದು ಬಳಿಕ ಬಿಟ್ಟುಬಿಟ್ಟಿದ್ದರು. ಕಾರ್ತಿಕ್ ರಾಜ್ ಹತ್ಯೆಯಾದ ಒಂದು ವರ್ಷದ ನಂತರ ನೈಜ ಆರೋಪಿಗಳಾದ ಆತನ ತಂಗಿ ಹಾಗೂ ಆಕೆಯ ಗೆಳೆಯ ಸಹೋದರರಿಬ್ಬರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಅಭಿಲಾಷ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ – 9152987821