ಮಂಗಳೂರು, ಡಿ 14 (DaijiworldNews/DB): ನಿರ್ಮಾಣ ಹಂತದ ಮನೆಯೊಂದರ ಶೌಚಾಲಯದ ಗುಂಡಿ ತೋಡುತ್ತಿದ್ದ ವೇಳೆ ಮಣ್ಣು ಕುಸಿತಗೊಂಡು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಡೂರು ಗ್ರಾಮದ ಅಳಿಕೆ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ಸ್ಥಳೀಯರಾದ ಆದಂ (63) ಮೃತಪಟ್ಟವರು. ಕಾರ್ಮಿಕರಾದ ಇಬ್ರಾಹಿಂ ಮತ್ತು ಇಮ್ತಿಯಾಜ್ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಂಗಳವಾರ ಸುಮಾರು ಸಂಜೆ 3.30ರಿಂದ 4 ಗಂಟೆ ವೇಳೆಗೆ ಘಟನೆ ನಡೆದಿದೆ. ನಿರ್ಮಾಣ ಹಂತದ ಮನೆಯ ಶೌಚಾಲಯದ ಗುಂಡಿಯನ್ನು ಮೂವರು ಕಾರ್ಮಿಕರು ಅಗೆಯುತ್ತಿದ್ದರು. ಸುಮಾರು ಏಳೆಂಟು ಅಡಿವರೆಗೆ ಗುಂಡಿ ತೋಡಲಾಗಿತ್ತು. ಈ ವೇಳೆ ಮೇಲ್ಭಾಗದ ಮಣ್ಣು ಸಡಿಲಗೊಂಡು ಒಮ್ಮೆಲೆ ಕುಸಿದು ಬಿದ್ದಿದೆ. ಗುಂಡಿಯಲ್ಲಿದ್ದ ಆದಂ ಅವರ ಮೇಲೆ ಕುಸಿದ ಮಣ್ಣು ಬಿದ್ದ ಕಾರಣ ಅವರು ಮಣ್ಣಿನಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಬಜಪೆ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.