ಉಡುಪಿ, ಡಿ 13 ( DaijiworldNews/MS): ಬೈಂದೂರು ಕ್ಷೇತ್ರದಲ್ಲಿ ತಾನು ಅಭ್ಯರ್ಥಿ ತನಗೆ ಟಿಕೆಟ್ ಆಗಿದೆ ಎಂದು ಹೇಳಿಕೊಂಡು ತಿರುಗುವುದು, ಗುಂಪು ಗುಂಪಾಗಿ ಸಭೆ ನಡೆಸುವುದು ಪಕ್ಷದ ಗಮನಕ್ಕೆ ಬಂದಿದೆ. ಭಾರತೀಯ ಜನತಾ ಪಕ್ಷ ಇನ್ನೂ ಯಾವ ಕ್ಷೇತ್ರದಲ್ಲಿಯೂ ಕೂಡಾ ಅಭ್ಯರ್ಥಿಗಳ ಘೋಷಣೆ ಮಾಡಿಲ್ಲ. ಯಾರೂ ಕೂಡಾ ತಮಗೆ ಟಿಕೆಟ್ ಲಭಿಸಿದೆ ಎಂದು ಕಾರ್ಯಕರ್ತರ ನಡುವೆ ಗೊಂದಲ ಸೃಷ್ಟಿಸಿದರೆ ಪಕ್ಷ ಅವರ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾ ಅಧ್ಯಕ್ಷ ಸುರೇಶ ನಾಯಕ್ ಕುಯಿಲಾಡಿ ಹೇಳಿದರು.
ಅವರು ಡಿ.13ರಂದು ಹೆಮ್ಮಾಡಿಯ ಹೋಟೆಲ್ ಜ್ಯುವೆಲ್ ಪಾರ್ಕ್ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.
ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಎಲ್ಲರಿಗೂ ಹಕ್ಕಿದೆ. ಆದರೆ ಟಿಕೆಟ್ ಕ್ಷೇತ್ರದಲ್ಲಿ ಕೊಡುವುದಲ್ಲ. ಯಾರಿಗೆ ಟಿಕೆಟ್ ನೀಡಬೇಕು ಎಂದು ಪಕ್ಷ ನಿರ್ಧರಿಸುತ್ತದೆ. ಅಲ್ಲಿಯ ತನಕ ಅಕಾಂಕ್ಷಿಗಳು ಸುಮ್ಮನಿದ್ದು ಪಕ್ಷದ ಬೆಳವಣಿಗೆಗೆ ಶ್ರಮಿಸಬೇಕು ಹೊರತು ಅನಗತ್ಯ ಗೊಂದಲ ಸೃಷ್ಟಿ ಮಾಡಬಾರದು ಎಂದರು. ಪಕ್ಷ ಟಿಕೆಟ್ ಯಾರಿಗೂ ಕೊಡಬಹುದು. ಪಕ್ಷ ಅಧಿಕೃತವಾಗಿ ಅಭ್ಯರ್ಥಿಗಳ ಘೋಷಣೆ ಮಾಡುವ ತನಕ ತಾಳ್ಮೆಯಿಂದಿರಿ ಎಂದರು.
ಉಡುಪಿ ಜಿಲ್ಲೆಯ ಐದು ಶಾಸಕರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಇನ್ನೂ ಹೆಚ್ಚಿನ ಅಂತರದಲ್ಲಿ ಜಿಲ್ಲೆಯ ಐದೂ ಸ್ಥಾನಗಳಲ್ಲಿಯೂ ಬಿಜೆಪಿ ಗೆಲುವು ಸಾಧಿಸಲಿದೆ. ಜಿಲ್ಲೆಯ 155 ಗ್ರಾಮ ಪಂಚಾಯತ್ಗಳ ಪೈಕಿ 115 ಗ್ರಾಮ ಪಂಚಾಯತ್ಗಳಲ್ಲಿ ಬಿಜೆಪಿ ಹಿಡಿತವಿದೆ. ಜಿ.ಪಂ. ತಾ.ಪಂ. ಶಾಸಕರು, ಸಂಸದರು ನಮ್ಮವರೇ ಇದ್ದಾರೆ. ಜಿಲ್ಲೆಯಲ್ಲಿ ಆಗಿರುವ ಅಭಿವೃದ್ದಿ ಕಾರ್ಯಗಳ ಬಗ್ಗೆ ಚರ್ಚೆ ಮಾಡಲು ಕಾಂಗ್ರೆಸ್ಗೆ ಆಸಕ್ತಿ ಇದ್ದರೆ ಬರಲಿ ಎಂದರು.
ಕಾರ್ಕಳದಲ್ಲಿ ಪ್ರಮೋದ್ ಮುತಾಲಿಕ್ ಸ್ಪರ್ಧೆಯ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಪ್ರಮೋದ್ ಮುತಾಲಿಕ್ ಲಾಗ ಹಾಕಿದರೂ 3 ಸಾವಿರ ಮತ ಸಿಗುವುದಿಲ್ಲ. ನಿಜವಾದ ಹಿಂದುತ್ವ ಯಾವುದೆಂದು ಕಾರ್ಕಳದ ಮತದಾರರು ತೋರಿಸಿಕೊಡಲಿದ್ದಾರೆ ಎಂದರು.
ಚುನಾವಣೆಯಲ್ಲಿ ಯುವಕರಿಗೆ ಅವಕಾಶ ಕೊಡಬೇಕು ಎನ್ನುವುದಕ್ಕೆ ನನ್ನ ಸಹಮತವಿದೆ. ಕರ್ನಾಟಕದಲ್ಲಿ ಆ ರೀತಿ ಮಾಡಿದರೆ ಉತ್ತಮ ಫಲಿತಾಂಶ ಕಾಣಬಹುದು ಎಂದು ಹೇಳಿದರು.
ಕಾಪುವಿನಲ್ಲಿ ನೀವು ಅಕಾಂಕ್ಷಿಯಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದ ತೀರ್ಮಾನ ಅಂತಿಮ. ನಾನು ಪಕ್ಷಕ್ಕಾಗಿ ಮೂರುದಶಕಗಳಿಂದ ಕೆಲಸ ಮಾಡಿದ್ದೇನೆ. ಅವಕಾಶ ನೀಡಿದರೆ ಸ್ಪರ್ಧೆ ಮಾಡುತ್ತೇನೆ ಎಂದರು. ಸುದ್ಧಿಗೋಷ್ಠಿಯಲ್ಲಿ ಬೈಂದೂರು ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಪೂಜಾರಿ ಜೆಡ್ಡು, ಪ್ರಿಯದರ್ಶಿನಿ ದೇವಾಡಿಗ, ಅಲ್ಪಸಂಖ್ಯಾತ ಘಟಕದ ದಾವುದ್ ಉಪಸ್ಥಿತರಿದ್ದರು.