ಕಾಸರಗೋಡು, ಡಿ.13 (DaijiworldNews/SM): ಉದುಮ ಆಯಂಪಾರದ ಝುಬೈದಾ(60) ಎಂಬ ಮಹಿಳೆಯ ಕತ್ತು ಹಿಸುಕಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಥಮ ಆರೋಪಿ ತಪ್ಪಿತಸ್ಥ ಎಂದು ಕಾಸರಗೋಡು ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಮಂಗಳವಾರ ತೀರ್ಫು ನೀಡಿದೆ. ಶಿಕ್ಷೆ ಬುಧವಾರ ಪ್ರಕಟಿಸಲಿದೆ.
ವಿದ್ಯಾನಗರದ ಅಬ್ದುಲ್ ಖಾದರ್(32) ಆರೋಪಿಯಾಗಿದ್ದಾನೆ. ಮೂರನೇ ಆರೋಪಿ ವಿದ್ಯಾನಗರದ ಅರ್ಷಾದ್(28)ನನ್ನು ಖುಲಾಸೆಗೊಳಿಸಿದೆ. ಇನ್ನೋರ್ವ ಆರೋಪಿ ಸುಳ್ಯದ ಅಬ್ದುಲ್ ಅಝೀಜ್(36) ತಲೆ ಮರೆಸಿಕೊಂಡಿದ್ದಾನೆ.
ನ್ಯಾಯಾಂಗ ಬಂಧನದಲ್ಲಿದ್ದ ಅಬ್ದುಲ್ ಅಝೀಜ್ ನನ್ನು ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಸ್ಟಡಿಗೆ ಪಡೆದಿದ್ದ ೨೦೧೮ ರ ಸೆ. ೧೪ ರಂದು ಸುಳ್ಯ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ ಕರೆದುಕೊಂಡು ಬರುತ್ತಿದ್ದಾಗ ಸುಳ್ಯ ಕೆ.ಎಸ್.ಆರ್.ಟಿ.ಸಿ. ಬಸ್ಸು ನಿಲ್ದಾಣ ಪರಿಸರದಿಂದ ತಪ್ಪಿಸಿ ಪರಾರಿಯಾಗಿದ್ದನು. ಈತ ಈಗಲೂ ತಲೆ ಮರೆಸಿಕೊಂಡಿದ್ದಾನೆ.
೨೦೧೮ ರ ಜನವರಿ ೧೭ ರಂದು ಕೃತ್ಯ ನಡೆದಿತ್ತು . ಸ್ಥಳ ನೋಡಲು ಎಂದು ಹೇಳಿ ಬಂದಿದ್ದ ಇವರು ಝುಬೈದಾರ ಮನೆಗೆ ಬಂದಿದ್ದು , ಕುಡಿಯಲು ನೀರು ಕೇಳಿದ್ದರು. ಝುಬೈದಾ ಒಳಗಡೆ ನೀರು ತರಲು ತೆರಳುತ್ತಿದ್ದಂತೆ ಹಿಂಬಾಲಿಸಿದ ತಂಡವು ಕತ್ತು ಹಿಸುಕಿ ಕೊಲೆಗೈದಿದ್ದು, ಮನೆಯಲ್ಲಿದ್ದ ೨೭ ಗ್ರಾಂ.ನಷ್ಟು ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು. ಈಕೆ ಏಕಾಂಗಿಯಾಗಿ ವಾಸವಾಗಿದ್ದರಿಂದ ಮರುದಿನ ಕೃತ್ಯ ಬೆಳಕಿಗೆ ಬಂದಿತ್ತು.
ಕಳವುಗೈದ ಚಿನ್ನಾಭರಣ ವನ್ನು ಕಾಸರಗೋಡಿನ ಜುವೆಲ್ಲರಿಗೆ ಮಾರಾಟ ಮಾಡಿದ್ದು, ಇದನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಪ್ರಥಮ ಆರೋಪಿ ಅಬ್ದುಲ್ ಖಾದರ್ ಕೆಲ ಸಮಯ ಝುಬೈದಾ ರ ಮನೆ ಸಮೀಪ ಮನೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಝುಬೈದಾರ ಚಲನ ವಲನಗಳ ಬಗ್ಗೆ ಗಮನಿಸಿದ್ದು, ಇದರಿಂದ ಈಕೆ ಬಳಿ ಭಾರೀ ಮೌಲ್ಯದ ಚಿನ್ನಾಭರಣ ಹಾಗೂ ಹಣ ಇರಬಹುದು ಎಂಬ ಸಂಶಯದಿಂದ ಈ ಕೃತ್ಯ ನಡೆಸಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿತ್ತು.