ಮಂಗಳೂರು, ಮಾ.5(AZM): ಸಾಗರಮಾಲಾ ಯೋಜನೆಯಡಿ ಕುಳಾಯಿಯಲ್ಲಿ ನಿರ್ಮಾಣವಾಗಲಿರುವ ಮೀನುಗಾರಿಕಾ ಬಂದರು ಯೋಜನೆಗೆ ಮಾ.5ರಂದು ಕೇಂದ್ರ ಸರಕಾರದ ರಸ್ತೆ ಸಾರಿಗೆ, ಶಿಪ್ಪಿಂಗ್ ಮತ್ತು ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿಯವರು ವೀಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ.
ಸಚಿವರು ಯೋಜನೆಗೆ ಚಾಲನೆ ನೀಡುವುದನ್ನು ವೀಡಿಯೊ ಕಾನ್ಫರೆನ್ಸ್ ಎನ್ಎಂಪಿಟಿಯ ಜೆಎನ್ಸಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಬಿತ್ತರಿಸಲಾಯಿತು.
ಸಮಾರಂಭದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಜಿಲ್ಲೆಯ ಅಭಿವೃದ್ಧಿಗೆ ಸಮರ್ಪಕ ರಸ್ತೆ ಸಂಪರ್ಕ ಅಗತ್ಯ. ಈ ನಿಟ್ಟಿನಲ್ಲಿ ಸಾಗರ ಮಾಲ ಯೋಜನೆಯ ಸೇತುವೆ,ಬೈಪಾಸ್ ರಸ್ತೆ, ಸೇತುವೆ ನಿರ್ಮಾಣ ಮಹತ್ವದ ಯೋಜನೆಗಳಾಗಿವೆ ಎಂದು ಹೇಳಿದರು.
ಸಮಾರಂಭದ ಅತಿಥಿಯಾಗಿ ಭಾಗವಹಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲು, ಅಭಿವೃದ್ಧಿ ಕಾಮಗಾರಿಗಳ ನಾಮಫಲಕ ಅನಾವರಣಗೊಳಿಸಿ ಮಾತನಾಡಿದರು. ಈ ಯೋಜನೆ ರಾಜ್ಯ ಸರಕಾರದ ಸಹಕಾರದೊಂದಿಗೆ ಕೇಂದ್ರ ಸರಕಾರದ ಸಾಗರ ಮಾಲ ಯೋಜನೆಯ ಮೂಲಕ ಅನುಷ್ಠಾನಗೊಂಡಿದೆ. ರಾ.ಹೆ.-66ರಲ್ಲಿ ಮಂಗಳೂರು ನಗರ ಬೈಪಾಸ್, ಕೂಳೂರು ಸೇತುವೆ, ಸಾಣೂರು-ಬಿಕರ್ನಕಟ್ಟೆಯ ವರೆಗೆ ಚತುಷ್ಪಥ ರಸ್ತೆ ನಿರ್ಮಾಣ ಹಾಗೂ ಕೂಳೂರು ಮೀನುಗಾರಿಕಾ ಜಟ್ಟಿಗೆ ಶಿಲಾನ್ಯಾಸ ಸೇರಿದಂತೆ ಕಳೆದ ಐದು ವರುಷದಲ್ಲಿ 16,000 ಕೋಟಿ ರೂ. ಅನುದಾನ ವಿವಿಧ ಯೋಜನೆಯ ಮೂಲಕ ಮಂಜೂರಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಭರತ್ ವೈ.ಶೆಟ್ಟಿ ವಹಿಸಿದ್ದರು.
ಶಾಸಕ ವೇದವ್ಯಾಸ ಕಾಮತ್, ಮನಪಾ ಸದಸ್ಯರಾದ ಗಣೇಶ್ ಹೊಸಬೆಟ್ಟು, ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.