ಬಂಟ್ವಾಳ, ಮಾ 05(SM): ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪುನಃಪ್ರತಿಷ್ಠೆ, ಅಷ್ಟಬಂಧ, ನೂತನ ಧ್ವಜಸ್ತಂಭ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮಗಳು ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಬಂಟ್ವಾಳ ತಾಲೂಕಿನ ಎಲ್ಲ ಗ್ರಾಮಗಳಿಂದ ಸುಮಾರು ೬೦೦ಕ್ಕೂ ಅಧಿಕ ವಾಹನಗಳಲ್ಲಿ ಹೊರೆಕಾಣಿಕೆ ಮೆರವಣಿಗೆ ಬಂಟ್ವಾಳದ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಸಮೀಪ ಇರುವ ಮೈದಾನದಿಂದ ಪೊಳಲಿವರೆಗೆ ನಡೆಯಿತು.
ಬಂಟ್ವಾಳದಲ್ಲಿರುವ ಬ್ರಹ್ಮಶ್ರೀ ನಾರಾಯಣಗುರು ವೃತ್ತ ಸಮೀಪದ ಮೈದಾನದಲ್ಲಿ ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ರಸ್ತೆಯ ಇಕ್ಕೆಲಗಳಲ್ಲೂ ಸಿಂಗಾರ, ಚಪ್ಪರದೊಂದಿಗೆ ಬಿ.ಸಿ.ರೋಡಿನಿಂದ ಪೊಳಲಿವರೆಗೆ ಆಕರ್ಷಕ ಮೆರವಣಿಗೆ ಸಾಗಿ ಬಂತು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ರಮಾನಾಥ ರೈ, ಹಿರಿಯ ಸಾಹಿತಿ, ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ಎ.ಸಿ.ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.
ಇನ್ನು ಮೆರ್ವಣಿಗೆಯಲ್ಲಿ ಚೆಂಡೆ ವಾದನ, ಗೊಂಬೆ ಕುಣಿತಗಳು, ತೆರೆದ ಜೀಪುಗಳಲ್ಲಿ ಜಯಘೋಷ ಮೆರವಣಿಗೆಯಲ್ಲಿ ಕಂಡುಬಂತು.
ಸಂಭ್ರಮದಲ್ಲಿ ಬಾಗಿಯಾದ ಕ್ರೈಸ್ತ ಬಾಂಧವರು:
ಪೊಳಲಿ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಮೊಡಂಕಾಪು ಇನ್ಫೆಂಟ್ ಜೀಸಸ್ ಚರ್ಚ್ನ ಕ್ರೈಸ್ತ ಬಾಂಧವರೂ ಕೂಡ ಟೆಂಪೋದಲ್ಲಿ ಹೊರೆಕಾಣಿಕೆಯನ್ನು ಸಾಗಿಸಿ ಸೌಹಾರ್ದತೆ ಮೆರೆದರು. ಮೊಡಂಕಾಪುವಿನಿಂದ ಪೊಳಲಿವರೆಗೂ ಹಬ್ಬದ ಕಳೆ ಇದ್ದು, ಈ ಸಂಭ್ರಮದಲ್ಲಿ ಕ್ರೈಸ್ತ ಬಾಂಧವರೂ ಭಾಗಿಯಾದರು.