ಮಂಗಳೂರು, ಡಿ 13 ( DaijiworldNews/MS): ಸರ್ಕಾರವು ಪಶುಪಾಲನಾ ಇಲಾಖೆಯನ್ನು ಸದೃಢಗೊಳಿಸಲು ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ ಹಾಗೂ ಖಾಲಿ ಹುದ್ದೆಗಳ ಭರ್ತಿಗೆ ಅತಿ ಶೀಘ್ರವಾಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನಿಲ್ ಕುಮಾರ್ ಅವರು ತಿಳಿಸಿದರು.
ಅವರು ಡಿ. 12ರ ಸೋಮವಾರ ತಲಪಾಡಿಯ ದೇವಿನಗರದಲ್ಲಿ ಆರ್ ಐ ಡಿ ಎಫ್-24 ಯೋಜನೆಯಡಿ ನೂತನವಾಗಿ ನಿರ್ಮಾಣಗೊಂಡಿರುವ ತಲಪಾಡಿಯ ಪಶು ಚಿಕಿತ್ಸಾಲಯ, ಕೊಣಾಜೆ ಹಾಗೂ ಆಮ್ಲಮೊಗರು ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳ ಕಟ್ಟಡಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಈ ಪರಿಸರ ರೈತರ ವಿವಿಧ ಚಟುವಟಿಕೆಗಳಿಗೆ ಅನುಕೂಲವಾಗಬೇಕು, ಭಾನುವಾರುಗಳಿಗೆ ಸಕಾಲದಲ್ಲಿ ಅಗತ್ಯ ಚಿಕಿತ್ಸೆ ಲಭ್ಯವಾಗಬೇಕು ಎನ್ನುವ ಉದ್ದೇಶದಿಂದ ರಾಜ್ಯ ಸರ್ಕಾರದಿಂದ ಈ ಕ್ರಮ ವಹಿಸಲಾಗಿದೆ, ಪಶುಸಂಗೋಪನಾ ಇಲಾಖೆಗೆ ಹೊಸತನದ ಸ್ಪರ್ಶ ನೀಡಿರುವ ಸರ್ಕಾರ ಹೆಚ್ಚಿನ ಸಂಖ್ಯೆಯ ಪಶು ಚಿಕಿತ್ಸಾಲಯಗಳನ್ನು ನಿರ್ಮಾಣ ಮಾಡುತ್ತಿದೆ, ಮುಖ್ಯಮಂತ್ರಿಗಳ ವಿಶೇಷ ಆಸಕ್ತಿಯಿಂದ ಪಶುಸಂಗೋಪನ ಇಲಾಖೆಗೆ ಹೆಚ್ಚೆನ ಆದ್ಯತೆ ಲಭಿಸಿದೆ ಎಂದವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಧಾನಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ ಅವರು ಮಾತನಾಡಿ, ಗೋ ಶಾಲೆಗಳ ನಿರ್ಮಾಣದಿಂದ ಅಶಕ್ತ ಹಾಗೂ ಬೀಡಾಡಿ ದನಗಳಿಗೆ ಆಸರೆ ನೀಡಿದಂತಾಗುತ್ತದೆ ಎಂದರು.
ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಪಾಲಿ ಕ್ಲಿನಿಕ್ ಉಪ ನಿರ್ದೇಶಕ ಡಾ. ತಮ್ಮಯ್ಯ, ಉಳ್ಳಾಲ ನಗರ ಸಭೆ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್, ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂಚಲಾಕ್ಷಿ, ಉಪಾಧ್ಯಕ್ಷ ರಾಮಕೃಷ್ಣ ಪಟ್ಟೋರಿ, ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಶೆಟ್ಟಿ, ಉಪಾಧ್ಯಕ್ಷ ಫಯಾಝ್ ಪಿಲಿಕೂರು, ನಗರದ ಮಂಗಳಾದೇವಿ ಪಶುವೈದ್ಯ ವೈದ್ಯಾಧಿಕಾರಿ ರೇಖಾ, ಭಾಗವಹಿಸಿದ್ದರು.
ಬೆಂಗಳೂರಿನ ಎನ್.ಪಿ.ಸಿ.ಸಿ.ಎಲ್ ನ ಇಂಜಿನಿಯರ್ ಅಕ್ಷಯ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಮಂಗಳೂರು ಮುಖ್ಯ ಪಶು ವೈದ್ಯಾಧಿಕಾರಿ ಡಾ. ಅಶೋಕ್ ಕೆ.ಆರ್. ಸ್ವಾಗತಿಸಿದರು. ಜಿಲ್ಲಾ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಆಡಳಿತ ವಿಭಾಗದ ಉಪನಿರ್ದೇಶಕ ಡಾ. ಅರುಣ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೋಹನ್ ಶಿರ್ಲಾಲ್ ನಿರೂಪಿಸಿದರು. ತಾಂತ್ರಿಕ ವಿಭಾಗದ ಉಪನಿರ್ದೇಶಕ ಡಾ. ವಸಂತ್ ಕುಮಾರ್ ವಂದಿಸಿದರು.