ಮಂಗಳೂರು, ಮಾ 05(SM): ಮಂಗಳೂರಿನಲ್ಲಿ ಆಯೋಜಿಸಿದ್ದ ಮಹಿಳಾ ಬೈಕ್ ರ್ಯಾಲಿ ರದ್ದುಗೊಂಡ ಘಟನೆ ನಡೆದಿದೆ. ನಾಳೆ ಜಿಲ್ಲೆಯ ಅಡ್ಯಾರ್ ನಲ್ಲಿ ಬೃಹತ್ ಪರಿವರ್ತನ ಸಮಾವೇಶವನ್ನು ಆಯೋಜಿಸಲಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ವತಿಯಿಂದ ಬೈಕ್ ರ್ಯಾಲಿಯನ್ನು ಆಯೋಜಿಸಲಾಗಿತ್ತು.
ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿ ಸಮೀಪ ರ್ಯಾಲಿಗೆ ಸಿದ್ದತೆಗಳನ್ನು ಮಾಡಲಾಗಿತ್ತು. ಈ ಸಂದರ್ಭ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ. ಪೊಲೀಸರನ್ನು ಕಂಡಂತಹ ಮಹಿಳಾ ಘಟಕದ ಅಧ್ಯಕ್ಷರು ಹಾಗೂ ಸದಸ್ಯರು ರ್ಯಾಲಿಯನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ.
ಮಹಿಳಾ ರ್ಯಾಲಿ ಮೊಟಕುಗೊಳ್ಳಲು ಕಾರಣ, ರ್ಯಾಲಿ ಆಯೋಜನೆ ಸಂದರ್ಭದಲ್ಲಿ ಮಹಿಳಾ ಘಟಕ ಯಾವುದೇ ಪರವಾಣಿಗೆ ಪಡೆದಿರಲಿಲ್ಲ. ಹೀಗಾಗಿ ಪೊಲೀಸರನ್ನು ಕಂಡಾಕ್ಷಣ ರ್ಯಾಲಿಯನ್ನು ರದ್ದುಗೊಳಿಸಲಾಗಿದೆ. ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ಮಹಿಳಾ ಘಟಕದ ಶಾಲೆಟ್ ಪಿಂಟೊ, ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮಾತುಕತೆ ನಡೆಸಿ ರ್ಯಾಲಿಯನ್ನು ರದ್ದುಪಡಿಸಿದ್ದಾರೆ.
ಇನ್ನು ನಾಳೆ ನಡೆಯಲಿರುವ ಸಮಾವೇಶದಲ್ಲಿ ಭಾಗವಹಿಸಲು ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಮಾಜಿ ಸಿಎಂ ಸಿದ್ಧರಾಮಯ್ಯ ಮತ್ತಿತರರು ಭಾಗವಹಿಸಲಿದ್ದಾರೆ.