ಬಂಟ್ವಾಳ, ಡಿ 11 (DaijiworldNews/SM): ನ್ಯಾಯವಾದಿ ಮೇಲೆ ದೌರ್ಜನ್ಯ ನಡೆಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯ ಎಸ್ ಐ ಸುತೇಶ್ ಅಮಾನತುಗೊಂಡಿದ್ದಾರೆ.
ನ್ಯಾಯವಾದಿ ಕುಲದೀಪ್ ಶೆಟ್ಟಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಎಸ್ ಐ ಸುತೇಶ್ ಅವರನ್ನು ಅಮಾನತು ಮಾಡಿ ಪಶ್ಚಿಮ ವಲಯದ ಡಿಐಜಿ ಡಾ. ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ.
ಜಾಗದ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಕುಲದೀಪ್ ಶೆಟ್ಟಿ ಅವರ ಮನೆಗೆ ನುಗ್ಗಿದ ಪೂಂಜಾಲಕಟ್ಟೆ ಪೊಲೀಸರು ಅವರ ಮೇಲೆ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ಅಲ್ಲದೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ವಕೀಲರು ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಿದ್ದರು.
ಹಲ್ಲೆ ನಡೆಸಿದ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಎಸ್ ಐ ಸುತೇಶ್ ಅವರನ್ನು ದ.ಕ. ಜಿಲ್ಲಾ ಎಸ್ಪಿ ಕಚೇರಿಗೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಕಠಿಣ ಕ್ರಮಕ್ಕೆ ಆಗ್ರಹಿಸಿ ವಕೀಲರು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದರು. ಇದೀಗ ಪಶ್ಚಿಮ ವಲಯ ಡಿಐಜಿ ಡಾ. ಚಂದ್ರಗುಪ್ತ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.