ಮಂಗಳೂರು, ಡಿ 11 (DaijiworldNews/SM): ನಗರದ ಚಿನ್ನಾಭರಣ ಮಳಿಗೆಯಲ್ಲಿ ಉದ್ಯೋಗದಲ್ಲಿದ್ದ ಭಿನ್ನ ಸಮುದಾಯದ ಜೋಡಿ ಮೇಲೆ ಅನೈತಿಕವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನಲ್ಲಿ ಅನೈತಿಕ ಪೊಲೀಸ್ ಗಿರಿ ವಿರುದ್ಧ ಗೃಹ ಸಚಿವ ಅರಗ ಜ್ಞಾನೇಂದ್ರ ಗುಡುಗಿದ್ದು, ಅದರ ಬೆನ್ನಲ್ಲೇ ವಾರದ ಹಿಂದೆ ನಡೆದಿದ್ದ ಪ್ರಕರಣದ ಆರೋಪಿಗಳನ್ನು ಕದ್ರಿ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿಬಿನ್, ಗಣೇಶ್, ಪ್ರಕಾಶ್, ಚೇತನ್ ಬಂಧಿತರೆಂದು ಗುರುತಿಸಲಾಗಿದೆ.
ಚಿನ್ನಾಭರಣ ಮಳಿಗೆಯ ಮಾರಾಟ ವಿಭಾಗದ ಯುವಕ ಮತ್ತು ಯುವತಿಯು ಅನ್ಯೋನ್ಯತೆಯಿಂದಿರುವ ಬಗ್ಗೆ ಮಾಹಿತಿ ಪಡೆದುಕೊಂಡ ಗುಂಪು ಡಿ.6ರ ಸಂಜೆ ಯುವತಿಯ ಪೋಷಕರೊಂದಿಗೆ ಚಿನ್ನಾಭರಣದ ಮಳಿಗೆಗೆ ನುಗ್ಗಿ ಪೊಲೀಸರ ಸಮ್ಮುಖವೇ ಹಲ್ಲೆ ನಡೆಸಿತ್ತು ಎಂದು ಆರೋಪಿಸಲಾಗಿತ್ತು.