ಪೆರ್ಲ,ಮಾ 05(MSP): ಕೇರಳ-ಕರ್ನಾಟಕ ಗಡಿನಾಡು ಕಾಸರಗೋಡಿನ ಎಣ್ಮಕಜೆ ತರವಾಡು ಮನೆಯಲ್ಲಿ ಪಿಲಿಚಾಮುಂಡಿ, ರಕ್ತೇಶ್ವರಿ, ಪರಿವಾರ ದೈವಗಳ ವರ್ಷಾವಧಿ ನೇಮೋತ್ಸವ ಮಾ.1 ರಿಂದ ಮಾ.5 ರವರೆಗೆ ನಡೆಯಿತು.
ಕಾಸರಗೋಡಿನಲ್ಲಿ ಭವ್ಯವಾದ ಇತಿಹಾಸವನ್ನು ಹೊಂದಿರುವ ಈ ತರವಾಡು ಭೂತಾರಾಧನೆ ದೈವರಾಧಾನೆ, ನಾಗರಾಧನೆಯ ಮೂಲ ಕೇಂದ್ರ. ಸುಮಾರು 450 ವರ್ಷಗಳ ಇತಿಹಾಸ ಹೊಂದಿರುವ ಇಲ್ಲಿರುವ ಪಿಲಿಚಾಮುಂಡಿ ದೈವದ ಆರಾಧನೆ ಇಲ್ಲಿನ ವಿಶೇಷವಾಗಿದೆ. ಈ ಉತ್ಸವದಂದು ಇಡೀ ನಾಡಿನ ಜನತೆಯೇ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಸುಮಾರು 9 ದೈವಗಳ ಆರಾಧನೆ ಈ ತರವಾಡಿನಲ್ಲಿ ನಡೆಯುತ್ತದೆ. ಎಣ್ಮಕಜೆ ಪಟೇಲರ ಪ್ರಸಿದ್ಧಿ ಮತ್ತು ಜನಪರ ಕಾರ್ಯಗಳಿಂದ ಇಲ್ಲಿನ ಪಂಚಾಯತಿಗೂ ಅದೇ ಹೆಸರು ಜನಪರವಾಗಿ ಬಂದಿದೆ. ಒಂದು ಕಾಲದಲ್ಲಿ ಇದು ಜೈನಬಲ್ಲಾಳರ ವಂಶಸ್ಥರ ಬೀಡಾಗಿತ್ತು ಎನ್ನಲಾಗುತ್ತಿದೆ. ಆ ಕಾಲದಲ್ಲಿ ಮುಳಿಹಾಸಿನ ತರವಾಡು ಮನೆಯಲ್ಲಿ ದೈವಗಳ ಆರಾಧನೆ ನಡೆದುಕೊಂಡು ಬಂದಿತ್ತು. ಇಲ್ಲಿ ನಡೆದ ಅಗ್ನಿ ಆಕಸ್ಮಿಕದ ವೇಳೆ ದೈವದ ಕ್ಷೇತ್ರ ಬಿಟ್ಟು ಉಳಿದೆಲ್ಲವೂ ಬೆಂಕಿಗಾಹುತಿಯಾದಾಗ ಬಳಿಕ ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡು ಬಂದಂತೆ ಜೀರ್ಣೋದ್ಧಾರ ನಡೆದು ಬ್ರಹ್ಮಕಲಶೋತ್ಸವ ನಡೆಯಿತು. ಅಂದಿನಿಂದ ವರ್ಷಂಪ್ರತಿ ಅದ್ದೂರಿ ಉತ್ಸವ ನಡೆಯುತ್ತಿದೆ.
ವರ್ಷಾವಧಿ ನೇಮೋತ್ಸವ ಪ್ರಯುಕ್ತ ಇಲ್ಲಿ ಗುಳಿಗ, ಸತ್ಯದೇವತೆ, ಕೊರತಿ, ರಕ್ತೇಶ್ವರಿ ಹೀಗೆ ಪರಿವಾರ ದೈವಗಳಿಗೂ ನೇಮೋತ್ಸವ ಜನಪದೀಯ ಪರಂಪರೆಗೆ ಅನುಗುಣವಾಗಿ ನಡೆಯುತ್ತದೆ.
ವರ್ಷಾವಧಿ ನೇಮೋತ್ಸವ ಪ್ರಯುಕ್ತ, ತರವಾಡು ಮುಖ್ಯಸ್ಥ ವಿಶ್ವನಾಥ್ ಶೆಟ್ಟಿ, ಯುಎಇ ಎಕ್ಸ್ಚೇಂಜ್ ನ ಮಾಜಿ ಅಧ್ಯಕ್ಷ ಎಣ್ಮಕಜೆ ಸುಧೀರ್ ಶೆಟ್ಟಿ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಬಿಜೆಪಿಯ ಮುಖಂಡ ಬ್ರಿಜೇಶ್ ಚೌಟ ಹಾಗೂ ಸ್ಥಳೀಯ ಧಾರ್ಮಿಕ ಮತ್ತು ಸಾಮಾಜಿಕ ನಾಯಕರು ಮತ್ತು ತಾರವಾಡು ಕುಟುಂಬ ಸದಸ್ಯರು ಉಪಸ್ಥಿತರಿದ್ದರು.