ಬೆಳ್ತಂಗಡಿ,ಮಾ 05(MSP): ಸೋಮವಾರ ಮಂಗಳೂರಲ್ಲಿ ನಿಧನರಾದ ಕೇಂದ್ರ ಮಾಜಿ ಸಚಿವ ವಿ. ಧನಂಜಯಕುಮಾರ್ ಅವರ ಪಾರ್ಥಿವ ಶರೀರ ಅವರ ಹುಟ್ಟೂರಾದ ವೇಣೂರಿನಲ್ಲಿ ಮಂಗಳವಾರ ಪಂಚಭೂತಗಳಲ್ಲಿ ವಿಲೀನವಾಯಿತು.
ಪೂರ್ವಾಹ್ನ ಹನ್ನೆರಡು ಗಂಟೆಯ ಸುಮಾರಿಗೆ ಪಾರ್ಥಿವ ಶರೀರವನ್ನು ವೇಣೂರಿಗೆ ತರಲಾಯಿತು. ಮೇಲಿನ ಪೇಟೆಯಲ್ಲಿನ ಬಸದಿಗೆ ಸುತ್ತು ಹಾಕಿ ಬಳಿಕ ಮೆರವಣಿಗೆಯಲ್ಲಿ ವೇಣೂರು ಪೇಟೆ ಸನಿಹದ ಮೂಡುಕೋಡಿ ಗ್ರಾಮದ ಪಂಜಲಬೈಲು ಮನೆಗೆ ತರಲಾಯಿತು. ಅಂಬುಲೆನ್ಸ್ನಿಂದ ಪಾರ್ಥಿವ ಶರೀರವನ್ನು ಮನೆಯೊಳಗೆ ಇಡುವ ಸಂದರ್ಭಕುಟುಂಬಿಕರಿಗೆ, ನೆರೆಕರೆಯವರಿಗೆ, ಹಿತೈಷಿಗಳಿಗೆ ದುಃಖ ಉಮ್ಮಳಿಸಿ ಬಂತು.
ಮನೆಯಲ್ಲಿ ಜೈನ ಸಂಪ್ರದಾಯದ ಪ್ರಕಾರ ಅಂತ್ಯವಿಧಿಗಳನ್ನು ನಡೆಸಲಾಯಿತು. ನಂತರ ಸನಿಹದ ಗದ್ದೆಯಲ್ಲಿ ರಚಿಸಲಾದ ಚಿತೆಯಲ್ಲಿಡಲಾಯಿತು. ಧನಂಜಯಕುಮಾರ್ ಅವರ ಪುತ್ರ ಹಾಗೂ ತಮ್ಮ ಮಧ್ಯಾಹ್ನ ಒಂದು ಗಂಟೆ ಮೂವತ್ತೈದು ನಿಮಿಷಕ್ಕೆ ಅಗ್ನಿಸ್ಪರ್ಶ ಮಾಡಿದರು.
ಇದಕ್ಕೂ ಮೊದಲು ಸಕಲ ಸರಕಾರಿ ಮರ್ಯಾದೆಗಳೊಂದಿಗೆ, ಪೋಲಿಸ್ ಸಿಬ್ಬಂದಿಯವರು ಅಂತಿಮ ನಮನ ಸಲ್ಲಿಸಿ ಮೂರು ಸುತ್ತುಗುಂಡು ಹಾರಿಸಿ ಗೌರವ ಅರ್ಪಿಸಿದರು. ಈ ಸಂದರ್ಭ ಸಚಿವರಾದ ಯು.ಟಿ.ಖಾದರ್, ಮಾಜಿ ಸಚಿವರಾದ ಅಭಯಚಂದ್ರ ಜೈನ್, ರಮಾನಾಥ ರೈ, ಮಾಜಿ ಶಾಸಕರಾದ ವಸಂತ ಬಂಗೇರ, ಗಣೇಶ್ ಕಾರ್ನಿಕ್, ಮೂಡಬಿದರೆಯ ಡಾ| ಮೋಹನ ಆಳ್ವಾ, ಪ್ರತಾಪಸಿಂಹ ನಾಯಕ್, ಡಾ| ಬಿ. ಯಶೋವರ್ಮ, ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ, ಎಸಿ ಡಾ| ಕೃಷ್ಣಮೂರ್ತಿ, ತಹಸೀಲ್ದಾರ್ ಗಣಪತಿ ಶಾಸ್ತ್ರಿ, ವೃತ್ತ ನಿರೀಕ್ಷಕ ಸಂದೇಶ್, ಎಸ್ಐಎಚ್.ಎಸ್. ನಾಗರಾಜ್, ತಾ.ಪಂ. ಸದಸ್ಯ ವಿಜಯಗೌಡ, ಜಿ.ಪಂ. ಸದಸ್ಯ ಧರಣೇಂದ್ರ ಕುಮಾರ್ ವೇಣೂರಿನ ಗಣ್ಯರು, ಸಾವಿರಾರು ಸಾರ್ವಜನಿಕರು ಅಂತಿಮ ನಮನ ಸಲ್ಲಿಸಿದರು. ವೇಣೂರು ಕೆಳಗಿನ ಪೇಟೆಯಲ್ಲಿ ಮೃತರ ಸ್ಮರಣಾರ್ಥ ಕೆಲ ಹೊತ್ತು ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು.