ಉಡುಪಿ,ಮಾ 05(MSP): ನ್ಯಾಯಾಧೀಶರೊಬ್ಬರು ತಮ್ಮ ಪತ್ನಿಗೆ ದೈಹಿಕ ಹಿಂಸೆ, ಬಲವಂತದ ಗರ್ಭಪಾತ ನಡೆಸಿದ ಆರೋಪದಡಿ ಕಾನೂನಿನ ಸುಳಿಗೆ ಸಿಲುಕಿಕೊಂಡಿದ್ದಾರೆ. ಉಡುಪಿ ನ್ಯಾಯಾಲಯದ ನಾಲ್ಕನೇ ಜೆಎಂಎಫ್’ಸಿ ನ್ಯಾಯಾಧೀಶರಾಗಿ ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಮಂಗಳೂರು ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿದ್ದ ಅಶೋಕ್ ತಿಮ್ಮಯ್ಯ ವಿರುದ್ದ ಅವರ ಪತ್ನಿ ವರಲಕ್ಷ್ಮೀ ದೂರು ನೀಡಿದ್ದು, ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2012ರಲ್ಲಿ ವರಲಕ್ಷ್ಮೀ ಮೂಲತಃ ಚೆನ್ನರಾಯಪಟ್ಟಣ ತಾಲೂಕಿನ ಗರಕಹಳ್ಳಿಯ ಅಶೋಕ್ ತಮ್ಮಯ್ಯ ಅವರನ್ನು ಕುಣಿಗಲ್ ತಾಲೂಕಿನಲ್ಲಿ ಮದುವೆಯಾಗಿದ್ದರು. ಬಳಿಕ ಬೆಂಗಳೂರಿನ ಬನಶಂಕರಿಯಲ್ಲಿರುವ ಅಶೋಕ್ ಅವರ ಅಣ್ಣನ ಪತ್ನಿಯ ಮನೆಯಲ್ಲಿ ವಾಸ ಮಾಡಿದ್ದರು. ಈ ವೇಳೆ ಆಶೋಕ್, ಸಿದ್ದಪ್ಪ, ಶ್ವೇತಾ, ರೂಪಾ, ರತ್ನಮ್ಮ ಎಂಬವರು ವರಲಕ್ಷ್ಮೀ ಅವರಿಗೆ ಮಾನಸಿಕ ದೈಹಿಕ ಕಿರುಕುಳ ನೀಡಿ ಸೀಮೆಎಣ್ಣೆ ಸುರಿದು ಸಾಯಿಸುವುದಾಗಿ ಅಶೋಕ ಜೀವ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ಹೇಳಲಾಗಿದೆ.
ಆ ನಂತರ ಉಡುಪಿ ಬ್ರಹ್ಮಗಿರಿಯಲ್ಲಿ ತಾವು ವಾಸವಿದ್ದ ಅಪಾರ್ಟ್ ಮೆಂಟ್ ನಲ್ಲೂ ವರಲಕ್ಷ್ಮೀ ಹಣ ತಂದಿಲ್ಲ ಎಂದು ಕೋಲಿನಿಂದ ಹಲ್ಲೆ ಮಾಡಿದ್ದಾರೆ. ಈ ಸಂದರ್ಭ ಮಗುವಿಗೂ ಹಲ್ಲೆ ನಡೆಸಿದ್ದಾರೆ. ವರದಕ್ಷಿಣೆ ರೂಪದಲ್ಲಿ ಪಡೆದ ಚಿನ್ನಾಭರಣಗಳನ್ನು ಅಶೋಕ್ ಮಾರಾಟ ಮಾಡಿ ಮತ್ತೆ ಹಣ ತರುವಂತೆ ಪೀಡಿಸುತ್ತಿದ್ದರೆನ್ನಾಗಿದೆ.
ವರಲಕ್ಷ್ಮೀ 2018ರ ಜೂನ್ - ಜುಲೈನಲ್ಲಿ ಎರದೂವರೆ ತಿಂಗಳ ಗರ್ಭಿಣಿಯಾಗಿದ್ದರು. ಈ ವೇಳೆ ಅಶೋಕ್ ಬಲವಂತವಾಗಿ ಮಾತ್ರೆಗಳನ್ನು ನೀಡಿ ಗರ್ಭಪಾತ ಮಾಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪತ್ನಿ ವರಲಕ್ಷ್ಮೀ ಕೊಟ್ಟ ದೂರಿನಂತೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.