ಮಂಗಳೂರು ನ 1: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 2017 ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಇಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ಜರುಗಿತು. ಒಟ್ಟು 15 ಮಂದಿ ಸಾಧಕರಿಗೆ ಮತ್ತು ನಾಲ್ಕು ಸಂಸ್ಥೆಗಳಿಗೆ ನೆಹರೂ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಪ್ರಶಸ್ತಿ ಪ್ರದಾನ ಮಾಡಿದರು. ವೈದ್ಯಕೀಯ ಕ್ಷೇತ್ರದಲ್ಲಿ ಡಾ ನಂದ ಕಿಶೋರ್, ಕೃಷಿ ಕ್ಷೇತ್ರದಲ್ಲಿ ಕೃಷ್ಣ ಸಾಲಿಯಾನ್, ಪತ್ರಿಕೋದ್ಯಮದಲ್ಲಿ ಕೇಶವ್ ಕುಂದರ್, ನಾಟಿ ವೈದ್ಯ ಕಲಾಯಿ ಈಶ್ವರ ಪೂಜಾರಿ, ಸಮಾಜ ಸೇವೆಗಾಗಿ ಕೆ ಆರ್ ನಾಥ್ ಕೊಂಚಾಡಿ, ಕ್ರೀಡೆಯಲ್ಲಿ ಬೆಂಗ್ರೆ ವಿಜಯ ಸುವರ್ಣ, ನೃತ್ಯಕ್ಷೇತ್ರದಲ್ಲಿ ಶ್ರೀಧರ ಹೊಳ್ಳ, ಶಿಕ್ಷಣಕ್ಕಾಗಿ ಎಸ್ ಎಂ ರಶೀದ್, ಸಿನಿಮಾಕ್ಕಾಗಿ ವಿನ್ನಿ ಫೆರ್ನಾಂಡಿಸ್, ಯಕ್ಷಗಾನ ಕ್ಷೇತ್ರದಲ್ಲಿ ಉಜಿರೆ ಅಶೊಕ್ ಭಟ್ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿ ದೇವಿಪ್ರಸಾದ್ ಬೆಳ್ತಂಗಡಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕನ್ನಡ ರಾಜ್ಯೋತ್ಸವ ಸಭಾ ಕಾರ್ಯಕ್ರಮದ ಮುನ್ನ ಡಾ ಬಿ ಆರ್ ಅಂಬೇಡ್ಕರ್ ವೃತ್ತದಿಂದ ಮೈದಾನದವರೆಗೆ ಆಕರ್ಷಕ ಮೆರವಣಿಗೆ ನಡೆಯಿತು. ಕನ್ನಡಮ್ಮನ ಮಹಿಮೆಯನ್ನು ಬಿಂಬಿಸುವ ಕೃತಿಗಳ ಪ್ರದರ್ಶನ, ಸ್ಥಬ್ಧಚಿತ್ರಗಳನ್ನು ಪ್ರದರ್ಶನ ನಡೆಯಿತು. ಮೆರವಣಿಗೆಯನ್ನು ಉದ್ಘಾಟಿಸಿದ ಹಿರಿಯ ಸಾಹಿತಿ ಸಾರಾ ಅಬೂಬಕ್ಕರ್ ಕನ್ನಡ ಕೃತಿಗಳನ್ನು ಹೆಚ್ಚು ಹೆಚ್ಚು ಪ್ರಸಾರ, ಓದುವ ಮೂಲಕ ಕನ್ನಡಕ್ಕೆ ನಮ್ಮ ಕೊಡುಗೆ ನೀಡೋಣ ಎಂದರು. ಶಾಲಾ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡರು.