ಉಡುಪಿ, ಮಾ 04(MSP): ಮೀನುಗಾರಿಕಾ ಫಿಷರೀಸ್ ಫೆಡರೇಷನ್ನ ಬಹುಕೋಟಿ ಹಗರಣಕ್ಕೆ ಸಂಬಂಧಿಸಿ ಸಿಒಡಿ ತನಿಖೆಯನ್ನು ಚುರುಕುಗೊಳಿಸಬೇಕೆಂದು ತಾನು ನಡೆಸಿದ್ದ ಪತ್ರಿಕಾಗೋಷ್ಠಿಯಿಂದ ಅಸಮಾಧಾನಗೊಂಡಿರುವ ಯಶಪಾಲ್ ಸುವರ್ಣ ಸಾಮಾಜಿಕ ಜಾಲತಾಣಗಳಲ್ಲಿ ತೀರಾ ನೀಚ ಮಟ್ಟದ ಪ್ರತಿಕ್ರಿಯೆ ತೋರಿದ್ದಾರೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಆರೋಪಿಸಿದ್ದಾರೆ.
ವಾಟ್ಸಾಪ್ ಗ್ರೂಪ್ನಲ್ಲಿ ಅವಹೇಳನಕಾರಿ ಸಂದೇಶಗಳನ್ನು ರವಾನಿಸಿರುವ ಯಶಪಾಲ್ ಸುವರ್ಣ ಅವರು, ವಿಶ್ವಾಸ್ ಅಮೀನ್ನ ಕುಟುಂಬಕ್ಕೆ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಅವರಿಗೆ ಮಾ.೪ ರ ಸೋಮವಾರ ದೂರು ನೀಡಿದ್ದಾರೆ. ಈ ದೂರಿನಲ್ಲಿ, ”ಯಶ್ಪಾಲ್ ಬೆದರಿಕೆ ಸಂದೇಶದಲ್ಲಿ ಹಣ ಬೇಕಿದ್ದರೆ ನಿನ್ನ ತಾಯಿ ತಂಗಿಯನ್ನು ಮಾರಿಬಿಡು ” ಎಂದು ಅವಹೇಳನಕಾರಿಯಾಗಿ ನಿಂದಿಸಿದ್ದಾನೆ. ಮಾತ್ರವಲ್ಲದೆ ಪತ್ರಿಕಾಗೋಷ್ಠಿ ನಡೆಸಿದ ಸಮಯದಿಂದ ಯಶಪಾಲ್ ಸುವರ್ಣ ಹಾಗೂ ಅವರ ಸಂಗಡಿಗರಿಂದ ಹಲವು ರೀತಿಯಲ್ಲಿ ಬೆದರಿಕೆ ಬರುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಒಬಿಸಿ ಘಟಕದ ಅಧ್ಯಕ್ಷರಾದ ಯತೀಶ್ ಕರ್ಕೇರ, ಉಡುಪಿ ವಿಧಾನಸಭಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಪ್ರಶಾಂತ್ ಪೂಜಾರಿ, ಬೈಂದೂರು ವಿಧಾನಸಭಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶೇಖರ್ ಪೂಜಾರಿ, ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಮೇಶ್ ಶೆಟ್ಟಿ ಕುಂದಾಪುರ, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಕಾರ್ಯದರ್ಶಿ ಕಾರ್ತಿಕ್ ಅಮೀನ್, ಕಾಪು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಆಚಾರ್ಯ ಹಾಗೂ ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದು ತಕ್ಷಣ ಕ್ರಮಕ್ಕೆ ಆಗ್ರಹಿಸಿದರು.