ಮಂಗಳೂರು, ಮಾ 04(MSP):ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ನಾಯಕ ಸತ್ಯಜಿತ್ ಸುರತ್ಕಲ್ ಅವರಿಗೆ ಟಿಕೆಟ್ ನೀಡುವಂತೆ ಅವರ ಬೆಂಬಲಿಗರು ವಿನೂತನ ತಂತ್ರ ಹೂಡಿ, ನಗರದಲ್ಲಿ ಅಲ್ಲಲ್ಲಿ ಫ್ಲೆಕ್ಸ್ ಹಾಕಿ ಮತ್ತು ಟ್ವಿಟರ್ ನಲ್ಲೂ ಅಭಿಯಾನ ಹೂಡಿ ಟಿಕೆಟ್ ಗಾಗಿ ಒತ್ತಡ ಹೇರಿದ ತಂತ್ರ ಠುಸ್ ಪಟಾಕಿಯಾಗಿದೆ. ಯಾಕೆಂದರೆ ರಾಜ್ಯ ನಾಯಕರ ಖಡಕ್ ಸೂಚನೆಯಂತೆ ಸತ್ಯಜಿತ್ ಅಭಿಮಾನಿಗಳು ಪ್ಲೆಕ್ಸ್ ತೆರವುಗೊಳಿಸಲು ಮುಂದಾಗಿದ್ದಾರೆ.
ರಾಜ್ಯ ಬಿಜೆಪಿ ನಾಯಕರಿಂದ ಸೂಚನೆ ದೊರೆತ ಕೂಡಲೇ ಲೋಕಸಭಾ ಚುನಾವಣಾ ಟಿಕೆಟ್ ಆಕಾಂಕ್ಷಿ ಯಾಗಿದ್ದ ಬಿಜೆಪಿ ಮುಖಂಡ ಸತ್ಯಜಿತ್ ತಮ್ಮ ಪರವಾಗಿ ಜಿಲ್ಲೆಯಲ್ಲಿ ಹಾಕಲಾಗಿದ್ದ ಫ್ಲೆಕ್ಸ್ ಗಳನ್ನು ತೆಗೆದುಹಾಕುವಂತೆ ತಮ್ಮ ಅಭಿಮಾನಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಪ್ರಸ್ತುತ ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್ ಅವರೇ ಮುಂಬರುವ ಚುನಾವಣೆಯಲ್ಲೂ ಸ್ಪರ್ಧಿಸಲು ತಯಾರಾಗಿದ್ದರು. ಆದರೆ ಈ ನಡುವೆ, ಸತ್ಯಜಿತ್ ಸುರತ್ಕಲ್ ತಮಗೆ ಟಿಕೆಟ್ ನೀಡುವಂತೆ ಬಿಜೆಪಿ ನಾಯಕರಿಗೆ ಪರೋಕ್ಷವಾಗಿ ಒತ್ತಡ ಹಾಕಲು ಫ್ಲೆಕ್ಸ್ ತಂತ್ರ ಅನುಸರಿಸಿದ್ದರು. ಸಧ್ಯ ಜಿಲ್ಲೆಯ ಬಿಜೆಪಿ ಪಾಳಯದಲ್ಲಿ ಎದ್ದಿದ್ದ ಟಿಕೆಟ್ ಅಸಮಾಧಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ತಾತ್ಕಲಿಕ ಮುಲಾಮು ಹಚ್ಚಿದ್ದು, ಪ್ಲೆಕ್ಸ್ ಗಳನ್ನು ತೆರವುಗೊಳಿಸುವಂತೆ ಸತ್ಯಜಿತ್ ಹಾಗೂ ಅವರ ಅಭಿಮಾನಿಗಳಿಗೆ ಸೂಚನೆ ನೀಡಿದ್ದಾರೆ.