ಮೂಡುಬಿದಿರೆ,ಮಾ 04(MSP):ತೋಡಾರು ಮಸೀದಿ ಉರೂಸ್ಗೆ ಸೇರಿದ ಜನಜಂಗುಳಿ ವೇಳೆ ಸಾರ್ವಜನಿಕರಿಗೆ ಭೀತಿ ಹುಟ್ಟಿಸುವ ರೀತಿಯಲ್ಲಿ ಕಾರೊಂದು ಅತಿವೇಗದಲ್ಲಿ ಚಲಾಯಿಸಿದ್ದನ್ನು ಪ್ರಶ್ನಿಸಿದಾಗ ಇತ್ತಂಡಗಳ ಮಧ್ಯೆ ಮಾತಿನ ಚಕಮಕಿ ನಡೆದು, ಹಲ್ಲೆ ನಡೆಸಿ ಕಾರಿಗೆ ಹಾನಿಗೊಳಿಸಿದ ಘಟನೆ ಶನಿವಾರ ರಾತ್ರಿ ನಡೆದಿದೆ.
ಶನಿವಾರ ರಾತ್ರಿ 9.45ಕ್ಕೆ ತೋಡಾರು ಉರೂಸ್ ನಡೆಯುತ್ತಿದ್ದ ವೇಳೆ ಅತಿವೇಗದಲ್ಲಿ ಕಾರು ಬಂದಾಗ ಹತ್ತಿರದಲ್ಲಿದ್ದ ಇಮ್ರಾನ್ ಎಂಬುವರು ಇದನ್ನು ಆಕ್ಷೇಪಿಸಿ ಕಾರನ್ನು ನಿಧಾನವಾಗಿ ಚಲಾಯಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಕಾರಿನಲ್ಲಿದ್ದವರು ಇಮ್ರಾನ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆಯೊಡ್ಡಿದ್ದಾರೆ. ಈ ಬಗ್ಗೆ ಕಾರು ಚಾಲಕ ಹಾಗೂ ಇತರ ಮೂವರ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರತಿದೂರು: ಘಟನೆಗೆ ಸಂಬಂಧಿಸಿದಂತೆ ಕಾರು ಚಾಲಕ ಸಾಯಿ ರಕ್ಷಿತ್ ಕದ್ರಿ ಕಂಬಳ ಎಂಬುವರು ಪ್ರತಿ ದೂರು ನೀಡಿದ್ದಾರೆ. ಶನಿವಾರ ರಾತ್ರಿ 9.30ಕ್ಕೆ ರಕ್ಷಿತ್, ಸ್ನೇಹಿತರಾದ ರಾಕೇಶ್, ಅಶ್ವಿತ್ ಹಾಗೂ ಆದರ್ಶ್ ಜತೆ ತೋಡಾರು ಮಸೀದಿ ಬಳಿ ಕಾರಿನಲ್ಲಿ ಬರುತ್ತಿದ್ದಾಗ ಜನಜಂಗುಂಗಳಿ ಸೇರಿದ್ದು, ದಾರಿ ಬಿಡುವಂತೆ ಕೇಳಿದಾಗ ಅಲ್ಲಿದ್ದ ಕೆಲವರು ನಮಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾರೆ. ಕಾರಿಗೆ ಗುದ್ದಿ ಗಾಜು ಪುಡಿ ಮಾಡಿರುತ್ತಾರೆ. ಕಾರಿಗೆ ಸುಮಾರು 5 ಲಕ್ಷ ನಷ್ಟವಾಗಿದೆ. ಇದೇ ದಾರಿಯಲ್ಲಿ ಮತ್ತೆ ವಾಪಸ್ ಬರದಂತೆ ತಂಡ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ರಕ್ಷಿತ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಮೂಡುಬಿದಿರೆ ಠಾಣೆಯಲ್ಲಿ ಎರಡೂ ಕಡೆಯವರ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.