ಕುಂದಾಪುರ ನ 1: ಖಾಸಗಿ ಮೀನು ಸಾಕಣಾ ಕೇಂದ್ರದಲ್ಲಿ 700 ಕ್ಕೂ ಹೆಚ್ಚು ಸಾಕು ಮೀನುಗಳು ಏಕಕಾಲದಲ್ಲಿ ಸಾವನ್ನಪ್ಪಿದ ಘಟನೆ ಕೋಟದ ಹಂದಟ್ಟಿನಲ್ಲಿ ಸೋಮವಾರ ಬೆಳಕಿಗೆ ಬಂದಿದೆ. ಹಂದಟ್ಟು ನಿವಾಸಿ ಲೋಹಿತ್ ಮರಕಾಲ ಪಡುಕರೆ ಹೊಳೆಯಲ್ಲಿ ಒಂದು ವರ್ಷದಿಂದ ಈ ಮೀನುಗಳನ್ನ ಸಾಕುತ್ತಿದ್ದು ಅನಿರೀಕ್ಷಿತವಾಗಿ ಈ ಮೀನುಗಳು ಸೋಮವಾರ ಸಾವನ್ನಪ್ಪಿದೆ. ಸಾವಿಗೆ ಸ್ಪಷ್ಟ ಕಾರಣ ಇದುವರೆಗೆ ತಿಳಿದು ಬಂದಿಲ್ಲ.
ಲೋಹಿತ್ ಮೀನು ಸಾಕಣಿಕೆಯನ್ನ ಸ್ವಂತ ಉದ್ಯೋಗವನ್ನಾಗಿ ಮಾಡುವ ದೃಷ್ಟಿಯಂದ ಪಡುಕೆರೆಯ ಹೊಳೆಯಲ್ಲಿ ಆರಂಭಿಸಿದ್ದರು. ಕೇವಲ ಮೂರು ತಿಂಗಳಿನಲ್ಲಿ ಈ ಮೀನುಗಳು ಮಾರಟವಾಗುತ್ತಿತ್ತು. ಆದರೆ ಅನಿರೀಕ್ಷಿತವಾಗಿ ಮೀನುಗಳ ಸಾವು ಯುವಕನನ್ನ ಕಂಗೆಡಿಸಿದೆ. ಸತ್ತ ಮೀನುಗಳ ಮೌಲ್ಯ ಸುಮಾರು 4 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈಗಾಗಲೇ ಸತ್ತ ಮೀನುಗಳನ್ನ ಪರೀಕ್ಷಾರ್ಥ ಮಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮೀನುಗಳ ಸಾವಿಗೆ ಸ್ಥಳೀಯವಾಗಿ ಕಾರ್ಯಾಚರಿಸುತ್ತಿರುವ ಕಾರ್ಖಾನೆಯಿಂದ ಹೊರಬಂದ ವಿಷಪೂರಿತ ನೀರು ಎಂಬ ಆರೋಪ ಕೇಳಿ ಬಂದಿದ್ದು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಆದರೆ ಮೀನುಗಳ ಮರಣೋತ್ತರ ಪರಿಕ್ಷೆಯ ವರದಿ ಬರುವ ತನಕ ಆರೋಪ ಮಾಡುವುದು ಸರಿಯಲ್ಲ ಎಂದು ಸಂತ್ರಸ್ಥ ಲೋಹಿತ್ ಈ ಆರೋಪವನ್ನ ತಳ್ಳಿ ಹಾಕಿದ್ದಾನೆ. ಈ ಕುರಿತು ಮೀನುಗಳ ಸಾವಿನ ಕುರಿತು ಮೀನುಗಾರಿಕಾ ಇಲಾಖೆಗೆ ಲೋಹಿತ್ ಮರಕಾಲ ಮನವಿ ಸಲ್ಲಿಸಿದ್ದು ಈ ಪ್ರಕರಣವನ್ನ ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ನೀಡುವಂತೆ ಆಗ್ರಹಿಸಿದ್ದಾನೆ.