ಬೈಂದೂರು,ಮಾ 03 (MSP): ಇಲ್ಲಿನ ಮೂಕಾಂಬಿಕಾ ನಿಲ್ದಾಣದಲ್ಲಿ ನಿಲುಗಡೆಯಿದ್ದರೂ ಶನಿವಾರ ಸಂಜೆ 5 ಗಂಟೆಗೆ ನಿಲ್ಲಬೇಕಾಗಿದ್ದ ಜೈಪುರ–ಎರ್ನಾಕುಳಂ ನಡುವಿನ ಮರುಸಾಗರ್ ಎಕ್ಸ್ಪ್ರೆಸ್ ರೈಲು ಚಾಲಕ ಮರೆವಿನಿಂದ ಇಲ್ಲಿನ ನಿಲ್ದಾಣದಲ್ಲಿ ನಿಲ್ಲದೆ ಮುಂದೆ ಸಾಗಿದ ಘಟನೆ ನಡೆದಿದೆ. ಮುಂದೆ ಅದು ಉಡುಪಿಯಲ್ಲಿ ನಿಂತಿತು.
ಆದರೆ ರೈಲು ನಿಲ್ಲಿಸದೆ ಮುಂದೆ ಸಾಗಿದ ಪರಿಣಾಮ ನಿಲ್ದಾಣದಲ್ಲಿ ಕಾಯುತ್ತಿದ್ದ ನೂರಾರು ಪ್ರಯಾಣಿಕರು ತೊಂದರೆ ಅನುಭವಿಸಿದರು. ಕಾರಣಾಂತರದಿಂದ ಆಗಿರುವ ಈ ಅಚಾತುರ್ಯದ ಬಗ್ಗೆ ತಕ್ಷಣ ಬೈಂದೂರು ಮತ್ತು ಉಡುಪಿ ನಿಲ್ದಾಣಗಳಲ್ಲಿ ಪ್ರಕಟಿಸಲಾಯಿತು.ಬೈಂದೂರಿನಲ್ಲಿ ರೈಲು ಹತ್ತಬೇಕಾಗಿದ್ದ ಸುಮಾರು 40 ಪ್ರಯಾಣಿಕರನ್ನು ಆ ರೈಲನ್ನು ಅನುಸರಿಸಿ ಬಂದ ಕಾರವಾರ–ಬೆಂಗಳೂರು ರೈಲಿನಲ್ಲಿ ಉಡುಪಿಗೆ ಕಳುಹಿಸಲಾಯಿತು. ಅವರು ಅಲ್ಲಿ ಕಾದುನಿಂತಿದ್ದ ಮರುಸಾಗರ್ ಎಕ್ಸ್ಪ್ರೆಸ್ನಲ್ಲಿ ಅವರಿಗಾಗಿ ಕಾಯ್ದಿರಿಸಿದ್ದ ಸ್ಥಳದಲ್ಲಿ ಕುಳಿತು ಪ್ರಯಾಣ ಮುಂದುವರಿಸಿದರು.
ಕೊಂಕಣ್ ರೈಲ್ವೇ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ಅಚಾತುರ್ಯ ನಡೆದಿದ್ದು, ಇದರಿಂದ ಪ್ರಯಾಣಿಕರಿಗೆ ಅಲ್ಪಸ್ವಲ್ಪ ತೊಂದರೆಯಾಗಿದೆ. ಅದಕ್ಕೆ ಶೀಘ್ರವೇ ಪರಿಹಾರ ಕಲ್ಪಿಸಲಾಗಿದೆ ಎಂದು ಕೊಂಕಣ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ.