ಉಡುಪಿ, ಮಾ.02(AZM): ಮಂಗನ ಕಾಯಿಲೆಗೆ ತುತ್ತಾಗಿ ಉಡುಪಿಯ ಖಾಸಗೀ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.
ಸಾಗರ ನಿವಾಸಿಯಾಗಿರುವ ಪೂರ್ಣಿಮಾ(38) ಮೃತ ಮಹಿಳೆ. ಈ ಮೂಲಕ ಮಂಗನಕಾಯಿಲೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಅಧಿಕೃತವಾಗಿ ಬಲಿಯಾದವರ ಸಂಖ್ಯೆ 10ಕ್ಕೇರಿದೆ.
ನಿನ್ನೆ ಹಾಗೂ ಇಂದಿನ ವರದಿಯದಂತೆ ಉಡುಪಿ ಜಿಲ್ಲೆಯಲ್ಲಿ ಯಾವುದೇ ಮಂಗಗಳು ಸಾವಿಗೊಳಗಾಗಿಲ್ಲ. ಇನ್ನು ಶಂಕಿತ ಮಂಗನ ಕಾಯಿಲೆಗಾಗಿ 50 ಜನರ ರಕ್ತ ಪರೀಕ್ಷೆ ನಡೆಸ ಲಾಗಿದ್ದರೂ ಯಾರೊಬ್ಬರಲ್ಲೂ ಸೋಂಕು ಪತ್ತೆಯಾಗಿಲ್ಲ ಎಂದು ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.
ಈ ನಡುವೆ ಜಿಲ್ಲೆಯಲ್ಲಿ ಮಂಗನಕಾಯಿಲೆ ಜನಜಾಗೃತಿ ಕಾರ್ಯಕ್ರಮ ಮುಂದುವರಿದಿದ್ದು, ಇಂದು 2757 ಮನೆಗಳಿಗೆ ಆರೋಗ್ಯ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಭೇಟಿ ನೀಡಿದ್ದು, ಕಳೆದ ಜ.9ರಿಂದ ಈವರೆಗೆ 1,17,766 ಮನೆಗಳಿಗೆ ಭೇಟಿ ನೀಡಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ.