ಬಂಟ್ವಾಳ,ಮಾ 01 (MSP): ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದಲ್ಲಿ 16 ಗ್ರಾಮಗಳಿಗೆ ಸಂಬಂಧಪಟ್ಟಂತೆ ಸಾವಿರ ಸೀಮೆಯ ವ್ಯಾಪ್ತಿಯ ಐತಿಹಾಸಿಕ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಪುನಃ ಪ್ರತಿಷ್ಠಾಪನೆ, ಅಷ್ಟಬಂಧ, ನೂತನ ಧ್ವಜಸ್ತಂಭ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವ ಮಾ.4ರಿಂದ 13ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಸುಮಾರು 1700 ವರ್ಷಗಳ ಹಿನ್ನೆಲೆ ಹೊಂದಿರುವ ದೇವಾಲಯದಲ್ಲಿ ಶ್ರೀ ರಾಜರಾಜೇಶ್ವರಿ ದೇವಿಯನ್ನು ಪೂಜಿಸಲಾಗುತ್ತಿದ್ದು, ಸುಮಾರು ಒಂಬತ್ತು ಅಡಿಗಳಿಗೂ ಮೀರಿದ ಬೃಹತ್ ಮೂರ್ತಿ ಶ್ರೀ ರಾಜರಾಜೇಶ್ವರಿ ಮೂರ್ತಿಯನ್ನು ವಿಶಿಷ್ಟವಾಗಿ ಪರಿಪಾಕಗೊಂಡ ಮಣ್ಣಿನಿಂದ ನಿರ್ಮಿಸಲಾಗಿದೆ. ಇದರೊಂದಿಗೆ ಶ್ರೀ ರಾಜರಾಜೇಶ್ವರಿ ಎಡಬಲದಲ್ಲಿ ಹೆಚ್ಚು ಎತ್ತರವಲ್ಲದಿದ್ದರೂ ಕಿರಿದಲ್ಲದ ಸರಸ್ವತಿ, ಭದ್ರಕಾಳಿ,ಸುಬ್ರಹ್ಮಣ್ಯ, ಮಹಾಗಣಪತಿ ವಿಗ್ರಹಗಳು ಮಣ್ಣಿನಿಂದಲೇ ರೂಪಿಸಲ್ಪಟ್ಟಿವೆ.
ಇನ್ನೊಂದು ವಿಶೇಷವೆಂದರೆ ಹನ್ನೆರಡು ವರ್ಷಕ್ಕೊಂದು ಸಲ ನಡೆಯುವ ಲೇಪಾಷ್ಟಗಂಧ ಕ್ರಿಯೆಗಾಗಿ ಮೂಲ ವಿಗ್ರಹವನ್ನು ರಚಿಸುವಾಗ ಉಪಯೋಗಿಸಿದ್ದ, ಕಲ್ಲಿನ ಬಲವಿರುವ ವಿಶಿಷ್ಟ ಪರಿಪಾಕಗೊಂಡ ಮಣ್ಣನ್ನೇ, ಮುಂದಿನ ಶತಮಾನಗಳಿಗೆಬೇಕಾಗುವಷ್ಟು, ಗರ್ಭಗುಡಿಯ ಒಂದು ಬದಿಯಲ್ಲಿ ಶೇಖರಿಸಿಟ್ಟಿದೆ.
ಶತಮಾನಗಳ ಇತಿಹಾಸ ಹೊಂದಿರುವ ದೇವಾಲಯವನ್ನು ವಾಸ್ತುಶಿಲ್ಪಿ ಮಹೇಶ್ ಮುನಿಯಂಗಳ ಅವರ ಮಾರ್ಗದರ್ಶನದಂತೆ ಪುನರ್ ನಿರ್ಮಿಸಲಾಗುತ್ತಿದ್ದು, ಸುಬ್ರಹ್ಮಣ್ಯ ತಂತ್ರಿ ಮಾರ್ಗದರ್ಶನದಲ್ಲಿ ದೇವರ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಮತ್ತಿತರ ಕಾರ್ಯ ನಡೆಯಲಿದೆ.
ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ದೇವಳ ನವೀಕರಣಗೊಂಡಿದ್ದು, ಶ್ರೀ ದುರ್ಗಾಪರಮೇಶ್ವರಿ, ರಾಜರಾಜೇಶ್ವರಿ, ಮಹಾಗಣಪತಿ, ಭದ್ರಕಾಳಿ ಹಾಗೂ ಪರಿವಾರ ಸಾನ್ನಿಧ್ಯಗಳ ಗರ್ಭಗೃಹಗಳನ್ನು ಪುನಃ ನಿರ್ಮಿಸಲಾಗಿದೆ. ಪೊಳಲಿ ಕ್ಷೇತ್ರದಲ್ಲಿ ವಿಶೇಷವಾಗಿ ಮೂಲದೇವರಾದ ಶ್ರೀ ರಾಜರಾಜೇಶ್ವರಿ ಮಣ್ಣಿನ ರೂಪದಲ್ಲಿರುವುದರಿಂದ ಅದರ ಶಕ್ತಿಯನ್ನು ಕಂಚಿನ ಮೂರ್ತಿಗೆ ಆವಾಹನೆಗೊಳಿಸಿ ಅಭಿಷೇಕ ನಡೆಸಲಾಗುವುದು. ಮಣ್ಣಿನ ಮೂರ್ತಿಗೆ ಲೇಪಾಷ್ಟಬಂಧ ನಡೆಸಲಾಗುತ್ತದೆ.
ಕೊನೆಯ ದಿನವಾದ ಮಾರ್ಚ್ 13ರಂದು ಬ್ರಹ್ಮಮಕಲಶ ನಡೆಯಲಿದ್ದು, ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕೆ ಸುಮಾರು 20 ಎಕರೆ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ, ದೇವಳದ ಸುತ್ತ ಸಿಸಿ ಕ್ಯಾಮೆರಾ ಅಳವಡಿಸಲು ವ್ಯವಸ್ಥೆ ಮಾಡಲಾಗಿದೆ. ಮಾ.4ರಿಂದ 8ರವರೆಗೆ ನಿರಂತರವಾಗಿ ಜಿಲ್ಲೆಯ ವಿವಿಧೆಡೆಯಿಂದ ಹೊರೆಕಾಣಿಕೆ ಮೆರವಣಿಗೆ ಆಗಮಿಸಲಿದೆ.