ಮಂಗಳೂರು, ಡಿ 11 (DaijiworldNews/DB): ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತೆ ಬಗ್ಗೆ ನಿರಂತರವಾಗಿ ನಿಗಾ ವಹಿಸುವ ಸಲುವಾಗಿ ವಿಶೇಷ ಬಾಂಬ್ ಪತ್ತೆ ಮತ್ತು ವಿಲೇವಾರಿ ಸ್ಕ್ವಾಡ್ ಉಪಕರಣಗಳನ್ನು ವಿಮಾನ ನಿಲ್ದಾಣದಲ್ಲಿ ಅಳವಡಿಸಲಾಗಿದ್ದು, ಇದನ್ನು ಸಿಐಎಸ್ಎಫ್ನ ಏರ್ಪೋರ್ಟ್ ಸೆಕ್ಯುರಿಟಿ ಗ್ರೂಪ್ಗೆ (ಎಎಸ್ಜಿ) ಹಸ್ತಾಂತರಿಸಲಾಗಿದೆ.
ವಿಮಾನ ನಿಲ್ದಾಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ ಪ್ರಾದೇಶಿಕ ನಿರ್ದೇಶಕ ರಾಜೀವ್ ಕುಮಾರ್ ರೈ ಅವರು ಉಪಕರಣಗಳನ್ನು ಎಎಸ್ಜಿಗೆ ಹಸ್ತಾಂತರಿಸಿದರು. ಸ್ಪೋಟಕಗಳನ್ನು ಹೊಂದಿರುವ ವ್ಯಕ್ತಿ ನಿಲ್ದಾಣದ ಬಳಿ ಸುಳಿದಾಡಿದಲ್ಲಿ ಎಎಸ್ಜಿ ಸಿಬಂದಿಗೆ ಈ ಉಪಕರಣ ನೆರವಿಗೆ ಬರುತ್ತದೆ.
ಉಪಕರಣ ಹಸ್ತಾಂತರಿಸಿದ ಬಳಿಕ ಮಾತನಾಡಿದ ರಾಜೀವ್ಕುಮಾರ್ ರೈ, ವಿಮಾನ ನಿಲ್ದಾಣದ ಭದ್ರತೆ ದೃಷ್ಟಿಯಿಂದ ಇಂತಹ ಉಪಕರಣಗಳು ಅಗತ್ಯವಾಗಿದೆ. ವಿಮಾನ ನಿಲ್ದಾಣದ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.
ಮಂಗಳೂರು ವಿಮಾನ ನಿಲ್ದಾಣವು ಎಎಸ್ಜಿ ಸಿಬಂದಿಯ ಬಳಕೆಗಾಗಿ ಬುಲೆಟ್ ನಿರೋಧಕ ವಾಹನವನ್ನು ಈ ವರ್ಷಾರಂಭದಲ್ಲಿ ನೀಡಿತ್ತು. ಅಲ್ಲದೆ ವಿಮಾನ ನಿಲ್ದಾಣ ಪರಿಸರದ ಮೇಲೆ ನಿಗಾ ವಹಿಸಿ ಕಾರ್ಯನಿರ್ವಹಿಸಲು ಸಹಕಾರಿಯಾಗುವ ನಿಟ್ಟಿನಲ್ಲಿ ಅತ್ಯಾಧುನಿಕ ಭದ್ರತಾ ಕಾರ್ಯಾಚರಣೆಗಳ ನಿಯಂತ್ರಣ ಕೇಂದ್ರ ಕೂಡಾ ಇಲ್ಲಿ ಸ್ಥಾಪನೆಗೊಂಡಿದೆ.