ಬಂಟ್ವಾಳ, ಡಿ. 10 (DaijiworldNews/SM) : ನೀವೆಲ್ಲಾ ವಿಭಿನ್ನ ರೀತಿಯ ಮದುವೆ ಆಮಂತ್ರಣ ಪತ್ರಿಕೆಗಳನ್ನು ನೋಡಿಯೇ ಇರ್ತೀರಾ. ಆದರೆ ಇಲ್ಲೊಬ್ಬರು ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಮದುವೆ ಆಮಂತ್ರಣವನ್ನು ಸಿದ್ಧಪಡಿಸಿ ಎಲ್ಲರ ಗಮನಸೆಳೆದಿದ್ದಾರೆ.
ಹೌದು ನಿವೃತ್ತ ಉಪನ್ಯಾಸಕ, ಪರಿಸರ ಪರ ಹೋರಾಟಗಾರ ರಾಜಮಣಿ ರಾಮಕುಂಜ ಅವರೇ ತಮ್ಮ ಮಗಳ ಮದುವೆ ಆಮಂತ್ರಣ ಪತ್ರಿಕೆಯನ್ನು ಹೊಸ ಬಗೆಯಲ್ಲಿ ಸಿದ್ಧಪಡಿಸಿದ್ದಾರೆ.
ರಾಜಮಣಿ ರಾಮಕುಂಜ ಅವರ ಪುತ್ರಿ ಮೇಧಾ ರಾಮಕುಂಜ ರವರ ವಿವಾಹವು ರಂಜನ್ ಆಚಾರ್ಯರ ಜೊತೆ ಇದೇ ತಿಂಗಳು ನಡೆಯಲಿದ್ದು, ಇದರ ಆಮಂತ್ರಣ ಇದೀಗ ಎಲ್ಲರ ಗಮನಸೆಳೆದಿದೆ.
ಆಮಂತ್ರಣ ಪತ್ರಿಕೆ ಯ ಮುಖಪುಟದಲ್ಲಿ ಮದು ಮಗ ಹಾಗೂ ಮದುಮಗಳ ರೇಖಾಚಿತ್ರವಿದ್ದು, ಇದನ್ನು ಖ್ಯಾತ ಚಿತ್ರಕಲಾವಿದ ಭುವನ್ ಮಂಗಳೂರು ರಚಿಸಿದ್ದಾರೆ.
ಒಳಗಿನಪುಟದಲ್ಲಿ ಹೋಮಕುಂಡಲವಿದ್ದು, ಅದರವಜೊತೆಗೆ ನಿಮ್ಮಿಂದ ಗಿಡವಾಗಲಿ ಎಂಬ ಬರಹದ ಅಡಿಯಲ್ಲಿ ಬೆಂಡೆಕಾಯಿ, ಬದನೆ, ಅರಿವೆ, ಅಲಸಂಡೆ ಹೀಗೆ ವಿವಿಧ ಬೀಜಗಳ ಪ್ಯಾಕೆಟ್ ಗಳಿವೆ. ಈ ಕಾಗದ ದೊರಕಿದ ಪ್ರತೀ ಮನೆಯಲ್ಲೂ ಗಿಡವೊಂದು ಮೊಳಕೆಯೊಡೆಯಬೇಕು , ಆಮೂಲಕ ಮನಪರಿವರ್ತನೆಯಾಗಿ ಪ್ರತಿಯೊಬ್ಬರಲ್ಲೂ ಪರಿಸರ ಕಾಳಜಿ ಬರಲಿ ಎನ್ನುವುದು ಇವರ ಆಶಯ.
ನಾಲ್ಕು ಪುಟಗಳ ಆಮಂತ್ರಣ ಪತ್ರಿಕೆಯ ಕೊನೆಯ ಪುಟದಲ್ಲಿ ಪರಿಸರ ಸಂರಕ್ಷಣೆಯ ಬರಹಗಳು ಗಮನಸೆಳೆಯುತ್ತಿದೆ. ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಎನ್ನುವ ಶೀರ್ಷಿಕೆಯಡಿ ಪ್ಲಾಸ್ಟಿಕ್ ಎಸೆಯಬೇಡಿ, ಕಸ ಎಸೆಯಬೇಡಿ,ಪ್ಲಾಸ್ಟಿಕ್ ಬಳಕೆ ಮಾಡಬೇಡಿ ಎನ್ನುವ ಸಂದೇಶಗಳನ್ನು ನೀಡಲಾಗಿದೆ.
ಒಟ್ಟಿನಲ್ಲಿ ಮದುವೆ ಎಂದಾಕ್ಷಣ ಪಾಶ್ಚಿಮಾತ್ಯ ಆಚರಣೆಗಳನ್ನೇ ನೆಚ್ಚಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿರುವ ಈ ಕಾಲಘಟ್ಟದಲ್ಲಿ ಇಂತಹಾ ಪರಿಸರ ಪ್ರೀತಿಯ ಬೀಜ ಬಿತ್ತುವ ಆಶಯಗಳು ದೇವರಿಗೂ ಪ್ರೀತಿ.