ಉಳ್ಳಾಲ, ಡಿ 10 (DaijiworldNews/DB): ಹಬ್ಬಗಳು ಕುಟುಂಬದ ಸದಸ್ಯರು ಎಲ್ಲರೂ ಒಟ್ಟು ಸೇರಿ ಆಚರಿಸುವ ಸಂಭ್ರಮವಾಗಿದೆ. ಯೇನಪೋಯ ವಿಶ್ವವಿದ್ಯಾನಿಲಯ ಕೂಡಾ 'ಯೆನ್ ಉತ್ಸವ' ಮೂಲಕ ಎಲ್ಲರೂ ಒಟ್ಟು ಸೇರಿ ಈ ಹಬ್ಬ ಆಚರಿಸುತ್ತಿರುವುದು ಶ್ಲಾಘನೀಯ.ಮೊದಲ ಆಚರಣೆಯಲ್ಲಿ ಮೊದಲ ಮುಖ್ಯ ಅತಿಥಿಯಾಗಿ ಭಾಗವಹಿಸಲು ತುಂಬಾ ಸಂತೋಷವಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಷ್ ಭಗವಾನ್ ಸೋನಾವಣೆ ಹೇಳಿದರು.
ಯೇನಪೋಯ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ವತಿಯಿಂದ ದೇರಳಕಟ್ಟೆಯ ಯೆಂಡ್ಯುರೆನ್ಸ್ ಸಭಾಂಗಣದಲ್ಲಿ ಜರಗಿದ 'ಯೆನ್ ಉತ್ಸವ್ -2022' ಆಸ್ಪತ್ರೆ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಯೇನಪೋಯ ವೈದ್ಯಕೀಯ ಸಂಸ್ಥೆಯು ಇಂದು ವೈದ್ಯಕೀಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದುಕೊಂಡು ವೈದ್ಯಕೀಯ ಸೇವೆಯನ್ನು ಸಮಾಜಕ್ಕೆ ಒದಗಿಸುತ್ತಿದೆ. ಯೇನಪೋಯ ಅಬ್ದುಲ್ಲಾ ಕುಂಞಿ ಅವರ ಕನಸು ಪರಿಶ್ರಮದೊಂದಿಗೆ ಮುನ್ನಡೆಯುತ್ತಿರುವ ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಏರುವಂತಾಗಲಿ ಎಂದವರು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ಯೇನಪೋಯ ಪರಿಗಣಿತ ವಿ.ವಿ ಉಪ ಕುಲಪತಿ ಎಂ. ವಿಜಯ್ ಕುಮಾರ್ ಮಾತನಾಡಿ, ಸಿಬ್ಬಂದಿಗಳು ಸಂಸ್ಥೆ ನಮ್ಮದೆಂದು ಕಾರ್ಯಾಚರಿಸುವುದರಿಂದ ಅಧೀಕ್ಷಕರ ಅಗತ್ಯತೆ ಇರುವುದಿಲ್ಲ. ಸಿಬ್ಬಂದಿ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿಭಾಯಿಸಿದಾಗ ಉತ್ಸವಕ್ಕೆ ಕಳೆ ಬರುತ್ತದೆ. ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಗಳಿಸಲು ಸಿಬ್ಬಂದಿಯೇ ಸಹಕಾರಿ ಎಂದರು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಕಿಶೋರ್ ಕುಮಾರ್ ಎನ್. ಮಾತನಾಡಿ, ಇದೊಂದು ಅಪರೂಪದ ಹಾಗೂ ಉತ್ತಮ ಕಾರ್ಯಕ್ರಮ. ಉತ್ಸವಗಳನ್ನು ಮಸೀದಿ, ದೇವಸ್ಥಾನ, ಚಚ್೯ಗಳಲ್ಲಿ ಮಾತ್ರ ಭಕ್ತರು ಮಾಡುತ್ತಾರೆ. ಆದರೆ ಆಸ್ಪತ್ರೆಗೆ ಬರುವ ರೋಗಿಗಳು ವಿಶೇಷ ಪೂಜೆ ನೆರವೇರಿಸುವವರಿದ್ದಾರೆ. ರೋಗಿಗಳ ಮುಖದಲ್ಲಿ ನಗುವನ್ನು ಕಾಣಲು ನಮ್ಮ ಮುಖದಲ್ಲಿ ನೋವನ್ನು ತರುವ ಸ್ಥಿತಿ ಆಸ್ಪತ್ರೆ ಸಿಬ್ಬಂದಿಗಳದ್ದಾಗಿದೆ. ಈ ನಡುವೆ ಉತ್ಸವಗಳ ಮೂಲಕ ಆಸ್ಪತ್ರೆ ಸಿಬ್ಬಂದಿಗೆ ಪ್ರೋತ್ಸಾಹಿಸುವ ಕಾರ್ಯ ಉತ್ತಮವಾದುದು ಎಂದು ಅಭಿಪ್ರಾಯಪಟ್ಟರು.
ಯೇನಪೋಯ ವಿ.ವಿ ಕುಲಸಚಿವ ಡಾ. ಗಂಗಾಧರ್ ಸೋಮಯಾಜಿ, ಯೇನಪೋಯ ವೈದ್ಯಕೀಯ ಕಾಲೇಜಿನ ಡೀನ್ ಡಾ. ಎಂ.ಎಸ್. ಮೂಸಬ್ಬ, ಯೇನಪೋಯ ಸಮೂಹ ಆಸ್ಪತ್ರೆಗಳ ಹಿರಿಯ ಸಲಹೆಗಾರ ಡಾ. ಅಮೀನ್ ಅಮಿನ್ ವಾಣಿ ಉಪಸ್ಥಿತರಿದ್ದರು. ವೈದ್ಯಕೀಯ ಅಧೀಕ್ಷಕ ಡಾ. ಪ್ರಕಾಶ್ ಆರ್.ಎಂ. ಸಲ್ದಾನ್ಹ ಸ್ವಾಗತಿಸಿದರು. ಡಾ.ನಾಗರಾಜ್ ಶೇಟ್ ಪ್ರಸ್ತಾವನೆಗೈದರು. ಡಾ.ಹಬೀಬ್ ರೆಹಮಾನ್ ವಂದಿಸಿದರು.
ಬೆಸ್ಟ್ ಎಂಪ್ಲಾಯ್ ಪ್ರಶಸ್ತಿಯನ್ನು ವೈದ್ಯರ ವಿಭಾಗದಲ್ಲಿ ಡಾ. ದಿವ್ಯಲಕ್ಷ್ಮೀ ಕೆ.ಎಸ್., ಪ್ಯಾರಮೆಡಿಕಲ್ ಹಾಗೂ ನರ್ಸಿಂಗ್ ವಿಭಾಗದ ಮಹಮ್ಮದ್ ಅನ್ಸಾರ್ ಮತ್ತು ವೃಂದ ಶರ್ಲಿ ಲೋಬೊ, ಕಚೇರಿ ಕೆಲಸದಲ್ಲಿ ಕಿರಣ್ ಗಟ್ಟಿ, ಜಯಲಕ್ಷ್ಮೀ , ಆಶಾ ಬಿ., ಅಬ್ದುಲ್ಲ ರಝಾಕ್, ಸಂಪತ್ ರಾಜ್ ಶೆಟ್ಟಿ ಪಡೆದುಕೊಂಡರು.
6,5465 ಯೆನ್ ಆರೋಗ್ಯ ಕಾರ್ಡು ವಿತರಣೆ
ಒಂದು ವರ್ಷದ ಅವಧಿಯಲ್ಲಿ 6,5465 ಯೆನ್ ಆರೋಗ್ಯ ಕಾರ್ಡು ವಿತರಣೆ ಮಾಡಲಾಗಿದೆ. 6,48,521 ಹೊರರೋಗಿ ವಿಭಾಗ, 64,098 ಒಳರೋಗಿ ಚಿಕಿತ್ಸೆಗಳನ್ನು ಪಡೆದುಕೊಂಡಿದ್ದಾರೆ. ಶೇ. 80-85 ಆಸ್ಪತ್ರೆ ಬೆಡ್ಗಳು ತುಂಬಿರುತ್ತದೆ. ಕೇರಳದಲ್ಲಿ 220 ಪ್ರದೇಶವನ್ನು ವ್ಯಾಪಿಸಿದೆ. ಗೋವಾ, ಒರಿಸ್ಸಾ ಮಹಾರಾಷ್ಟ್ರಗಳಿಂದಲೂ ರೋಗಿಗಳು ದಾಖಲಾಗುತ್ತಿದ್ದಾರೆ. ಮಕ್ಕಳ ತೀವ್ರ ನಿಗಾ ಘಟಕವನ್ನು ಉನ್ನತ ದರ್ಜೆಗೆ ಏರಿಸಲಾಗಿದೆ. ಆಸ್ಪತ್ರೆ ಗುಣಾತ್ಮಕವಾಗಿ ಕಾರ್ಯಾಚರಿಸುತ್ತಿದೆ ಎಂದು ಡಾ. ನಾಗರಾಜ್ ಶೇಟ್ ತಿಳಿಸಿದರು.