ಮಂಗಳೂರು, ಡಿ 10 (DaijiworldNews/DB): ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ, ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಮತ್ತು ಉಪ ಚುನಾವಣೆಗಳ ಫಲಿತಾಂಶ ನೋಡಿದ ಬಳಿಕ ಬಿಜೆಪಿಗೆ ಚುನಾವಣಾ ಭೀತಿ ಶುರುವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಹೇಳಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಗುಜರಾತ್ನಲ್ಲಿ ಗೆದ್ದಿರುವ ಕಾರಣಕ್ಕೆ ಕರ್ನಾಟಕವೂ ಗುಜರಾತ್ ದಾರಿಯಲ್ಲಿ ಸಾಗಲಿದೆ ಎಂದು ಬಿಜೆಪಿ ಹೇಳಿಕೊಂಡಿದೆ. ಆದರೆ ಹಿಮಾಚಲ ಪ್ರದೇಶದ ಹಾದಿಯಲ್ಲೇ ಕರ್ನಾಟಕ ಸಾಗುವುದು ನಿಶ್ಚಿತ. ಕರ್ನಾಟಕದಲ್ಲಿ ಜೆಪಿಯು ಶೇ.40 ಕಮಿಷನ್, ಮರಳು ಮಾಫಿಯಾ, ಆಡಳಿತ ವೈಫಲ್ಯ, ಜನವಿರೋಧಿ ನೀತಿಗಳು ಮತ್ತು ನಿಷ್ಕ್ರಿಯ ಮುಖ್ಯಮಂತ್ರಿ ಸೇರಿದಂತೆ ವಿವಿಧ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಯನ್ನು ಅಧಿಕಾರದಿಂದ ಜನ ಕೆಳಗಿಳಿಸಲಿದ್ದಾರೆ ಎಂದರು.
ಚುನಾವಣಾ ಭಯ ಎದುರಾಗಿರುವುದರಿಂದ ಬಿಜೆಪಿಯವರು ಹೊಸ ವಿವಾದಗಳನ್ನು ಹುಟ್ಟು ಹಾಕಲು ಪ್ರಯತ್ನಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್ ಎಂದಿದ್ದಕ್ಕೆ ಸಿದ್ದರಾಮಯ್ಯನವರು ತಕ್ಕ ಉತ್ತರ ನೀಡಿದ್ದಾರೆ. ಹಿಂದೂ-ಮುಸ್ಲಿಂ ಬಗ್ಗೆ ಮಾತ್ರ ಬಿಜೆಪಿಯವರು ಮಾತನಾಡುತ್ತಾರೆ ಮತ್ತು ಹೆಸರು ಬದಲಾಯಿಸುತ್ತಾರೆ. ಮುಸ್ಲಿಮರಿಲ್ಲದೆ ಬಿಜೆಪಿ ಪಕ್ಷವಿಲ್ಲ. ಎಸ್ಡಿಪಿಐ, ಎಎಪಿ, ಎಐಎಂಐಎಂನಂತಹ ’ಬಿ’ ತಂಡಗಳನ್ನು ಕಟ್ಟಿಕೊಂಡ ಅವರಿಗೆ ಹಣ ನೀಡುತ್ತಿದ್ದಾರೆ ಎಂದು ಹರೀಶ್ಕುಮಾರ್ ಆರೋಪಿಸಿದರು.
ದೇಶ ವಿರೋಧಿ ಭಾಷಣ ಮಾಡಿದರೂ ಒವೈಸಿ ವಿರುದ್ದ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿಯವರನ್ನು ಯಾರಾದರೂ ಟೀಕಿಸಿದರೆ ಜೈಲು ಸೇರುತ್ತಾರೆ ಎಂದು ಇದೇ ವೇಳೆ ಕುಟುಕಿದರು.
ಅಕ್ರಮ ಮರಳು ಗಣಿಗಾರಿಕೆ ಪ್ರದೇಶಗಳ ಮೇಲೆ ಲೋಕಾಯುಕ್ತ ದಾಳಿ ನಡೆಸುವ ಸ್ಥಿತಿಗೆ ತಲುಪಿದ್ದೇವೆ. ಮರಳು ದಂಧೆಯಿಂದ ಸಂಸದ, ಶಾಸಕರು ಜೀವನ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅಕ್ರಮ ಮರಳುಗಾರಿಕೆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದರು.
‘ಸಲಾಮ್ ಆರತಿ’ ಕೈಬಿಟ್ಟು ‘ಆರತಿ ನಮಸ್ಕಾರ’ ಎಂಬ ಪದವನ್ನು ಪರಿಚಯಿಸುವ ಮುಜರಾಯಿ ದೇವಸ್ಥಾನಗಳ ನಿರ್ಧಾರದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದರಿಂದ ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದರು.
ದಕ್ಷಿಣ ಕನ್ನಡದ ಎಂಟು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬಹು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹರೀಶ್ಕುಮಾರ್, ಆಕಾಂಕ್ಷಿಗಳು ಸ್ಥಾನಗಳನ್ನು ಬಯಸಿ ಅರ್ಜಿ ಸಲ್ಲಿಸುವುದು ಸಾಮಾನ್ಯ. ಪ್ರತಿ ಕ್ಷೇತ್ರದಲ್ಲಿ ಒಬ್ಬರಿಗೆ ಟಿಕೆಟ್ ನೀಡುವುದು ಹೈಕಮಾಂಡ್ ನಿರ್ಧರಿಸಿದ ಪ್ರಕ್ರಿಯೆಯಾಗಿದೆ. ಈ ಬಾರಿ ರಾಜ್ಯದಲ್ಲಿ ಶೇ.50ರಷ್ಟು ಹೊಸ ಮುಖಗಳಿಗೆ ಮತ್ತು ಯುವಕರಿಗೆ ಕಾಂಗ್ರೆಸ್ ಟಿಕೆಟ್ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.