ಕಾಸರಗೋಡು, ಡಿ 10 (DaijiworldNews/DB): ಮಂಗಳೂರು ಕುಕ್ಕರ್ ಪ್ರಕರಣದ ಆರೋಪಿ ಮಹಮ್ಮದ್ ಶಾರೀಕ್ ಕೊಚ್ಚಿಯಲ್ಲಿ ವಿದೇಶಿಗ ಸಹಿತ ನಾಲ್ವರ ಸಂಪರ್ಕದಲ್ಲಿರುವ ವಿಚಾರ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಲಭಿಸಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆಗಿಳಿದ ತಂಡ ನಾಲ್ವರನ್ನೂ ಪತ್ತೆ ಹಚ್ಚಿದೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿ ನೀಡಲು ತಂಡ ನಿರಾಕರಿಸಿದೆ.
ಶಾರೀಕ್ ಮಂಗಳೂರಿನಲ್ಲಿ ಸ್ಪೋಟ ನಡೆಸುವುದಕ್ಕೂ ಮುನ್ನ ಕೊಚ್ಚಿಗೆ ಹೋಗಿದ್ದ. ಅಲ್ಲಿ ಕೆಲವರೊಂದಿಗೆ ವ್ಯವಹಾರ ನಡೆಸಿದ್ದ. ಈ ಪೈಕಿ ಓರ್ವ ವಿದೇಶಿಗ, ಇಬ್ಬರು ಕೇರಳಿಯರು ಮತ್ತೊಬ್ಬ ತಮಿಳುನಾಡು ಮೂಲದವನಾಗಿದ್ದಾನೆ. ಈ ನಾಲ್ವರ ಗುರುತನ್ನೂ ಎನ್ಐಎ ತಂಡ ಪತ್ತೆ ಹಚ್ಚಿದೆ. ಆದರೆ ಇಬ್ಬರು ಕೇರಳೀಯರು ಹಲವು ವರ್ಷಗಳಿಂದ ವಿದೇಶದಲ್ಲೇ ಇದ್ದು, ಅವರ ಸಂಬಂಧಿಕರನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ತಮಿಳುನಾಡು ಮೂಲದ ವ್ಯಕ್ತಿಯೂ ಈ ಹಿಂದೆ ವಿದೇಶದಲ್ಲಿದ್ದ ಎನ್ನಲಾಗಿದೆ. ವಿದೇಶಿ ವ್ಯಕ್ತಿಯ ಸ್ಪಷ್ಟ ಚಿತ್ರಣ ಇನ್ನಷ್ಟೇ ಲಭಿಸಬೇಕಿದೆ. ಆದರೆ ಈ ಸಂಬಂಧ ಮಾಹಿತಿ ನೀಡಲು ತಂಡ ನಿರಾಕರಿಸಿದೆ.
ವಿಧ್ವಂಸಕ ಕೃತ್ಯ ಎಸಗಲು, ಭಯೋತ್ಪಾದನೆ ಚಟುವಟಿಕೆಗಾಗಿ ಹಣಕಾಸು ಹೊಂದಿಸುವ ಉದ್ದೇಶದಿಂದ ಶಾರೀಕ್ ಕೇರಳಕ್ಕೆ ಭೇಟಿ ನೀಡಿದ್ದನೆಂದು ತನಿಖೆ ವೇಳೆ ತಿಳಿದು ಬಂದಿದೆ. ಇನ್ನು ತನಿಖಾ ತಂಡವು ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದರೂ, ಕರ್ನಾಟಕ ವಿಶೇಷ ತನಿಖಾ ತಂಡ ತನ್ನ ತನಿಖೆಯನ್ನು ಮುಂದುವರಿಸಿದೆ. ಕಳೆದೆರಡು ವಾರಗಳಿಂದ ಕೊಚ್ಚಿಯಲ್ಲೇ ಬೀಡು ಬಿಟ್ಟಿರುವ ತನಿಖಾ ತಂಡ ಅವಶ್ಯ ಮಾಹಿತಿಗಳನ್ನು ಕಲೆ ಹಾಕುತ್ತಿದೆ. ಕೇರಳ ಪೊಲೀಸರು ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ.