ಉಳ್ಳಾಲ, ಡಿ 10 ( DaijiworldNews/MS): ರಾಷ್ಟ್ರೀಯ ಹೆದ್ದಾರಿ ಬಳಿಯ ಆರು ಅಂಗಡಿಗಳಿಗೆ ನುಗ್ಗಿದ ಕಳ್ಳರು ಸರಣಿ ಕಳವು ನಡೆಸಿ ಸಾವಿರಾರು ರೂ. ಬೆಲೆಬಾಳುವ ಸೊತ್ತುಗಳನ್ನು ಕಳವು ನಡೆಸಿರುವ ಘಟನೆ ಗಡಿಭಾಗ ತಲಪಾಡಿಯಲ್ಲಿ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.
ಅಶ್ರಫ್ , ಕುಲದೀಪ್, ಶ್ರೀಧರ್ ಹಾಗೂ ಮಹಮ್ಮದ್ , ಶಂಕರ್ ಎಂಬವರಿಗೆ ಸೇರಿದ ಅಂಗಡಿಗಳಿಂದ ಸಾವಿರಾರು ರೂ. ಬೆಲೆಬಾಳುವ ಸಿಗರೇಟ್ ಹಾಗೂ ಕ್ಯಾಷ್ ಡ್ರಾವರಿನಲ್ಲಿದ್ದ ನಗದು ಹಾಗೂ ಇನ್ನೋರ್ವ ಅಶ್ರಫ್ ಎಂಬವರಿಗೆ ಸೇರಿದ ಝೆರಾಕ್ಸ್ ಅಂಗಡಿಯಿಂದ ನಗದು, ಕಳವು ನಡೆಸಲಾಗಿದೆ. ರಾತ್ರಿ ವೇಳೆ ಎಲ್ಲಾ ಅಂಗಡಿಗಳ ಬೀಗ ಮುರಿದು ಕಳ್ಳರು ಕೈಚಳಕ ತೋರಿಸಿದ್ದಾರೆ. ಮಂಜೇಶ್ವರ ಹಾಗೂ ಕುಂಜತ್ತೂರು ಭಾಗದಲ್ಲಿಯೂ ಇದೇ ರೀತಿಯ ಕಳವು ಕೃತ್ಯ ನಡೆದಿದ್ದು, ಇದೀಗ ತಲಪಾಡಿಗೂ ವ್ಯಾಪಿಸಿದೆ. ಗಡಿಭಾಗ ತಲಪಾಡಿ ಗಾಂಜಾ ವ್ಯಸನಿಗಳ ಅಟ್ಟಹಾಸವೂ ಮಿತಿಮೀರಿದ್ದು , ಕಳವು ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆಯಿದೆ.
ರಾತ್ರಿ ತಿರುಗಾಡುತ್ತಿದ್ದ 800 !
ತಡರಾತ್ರಿ ವೇಳೆ ಅನುಮಾನಸ್ಪದ ರೀತಿಯಲ್ಲಿ 800 ಕಾರು ತಿರುಗಾಡುತ್ತಿತ್ತು. ತಂಡ ಇದೇ ಕಾರಿನಲ್ಲಿ ಬಂದು ಕೃತ್ಯವೆಸಗಿರುವ ಸಾಧ್ಯತೆಗಳನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಪೊಲೀಸರ ಬಿಗಿಬಂದೋಬಸ್ತ್ ನಡಿ ಕಳ್ಳರ ಕೈಚಳಕ !
ಗಡಿಭಾಗ ತಲಪಾಡಿಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ನಡೆಸುತ್ತಿದ್ದರೂ ಕಳ್ಳರು ಸರಣಿಯಾಗಿ ಅಂಗಡಿಗಳಿಂದ ಕಳವು ನಡೆಸಿದ್ದಾರೆ. ನಿತ್ಯ ಉಳ್ಳಾಲದ ಇನ್ಸ್ ಪೆಕ್ಟರ್ ಜೀಪ್, ಸಬ್ ಇನ್ಸ್ ಪೆಕ್ಟರ್ ವಾಹನ, ಹೈವೇ ಪ್ಯಾಟ್ರಲ್, ಹೊಯ್ಸಳ, ಬೈಕಿನಲ್ಲಿ ಬೀಟ್ ಪೊಲೀಸ್ ಅಲ್ಲದೆ ಗಡಿಯಲ್ಲಿ 50 ರಷ್ಟು ಪೊಲೀಸರು ಬಂದೋಬಸ್ತಿನಲ್ಲಿದ್ದರೂ ಕಳ್ಳರು ಕೃತ್ಯ ಎಸಗಿರುವುದು ವಿಶೇಷವಾಗಿದೆ. ಚೆಕ್ ಪಾಯಿಂಟ್ ಕೂಡ ತಲಪಾಡಿಯಲ್ಲಿ ಇದ್ದರೂ, ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಮಾರುತಿ 800 ಕಾರನ್ನು ಪರಿಶೀಲಿಸಿಲ್ಲವೇ ಅನ್ನುವ ಕುರಿತು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.