ಕಾರ್ಕಳ, ಡಿ 09 (DaijiworldNews/DB): ಬೆಲೆ ಬಾಳುವ ನಗ-ನಗದು ಎಗರಿಸಲು ಹೊಂಚು ಹಾಕಿ ಮನೆಯೊಂದಕ್ಕೆ ನುಗ್ಗಿ ಕಳ್ಳತನಕ್ಕೆ ತಡಕಾಡಿ ಏನು ಸಿಗದೇ ಇದ್ದಾಗ ಅಡುಗೆ ಕೋಣೆಯಲ್ಲಿದ್ದ 2 ಸಾವಿರ ಬೆಲೆ ಬಾಳುವ ಎರಡು ಒಲೆಯ ಗ್ಯಾಸ್ಸ್ಟವ್ ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಬ್ಬರನ್ನು ಕಾರ್ಕಳ ನ್ಯಾಯಾಲಯವು ಅಪರಾಧಿಗಳೆಂದು ಘೋಷಿಸಿ ತೀರ್ಪು ನೀಡಿ ಶಿಕ್ಷೆ ವಿಧಿಸಿದೆ.
ಹೆಬ್ರಿ ಬೇಳಂಜೆಯ ಹೊಸಮನೆಯ ರಾಜೇಶ್ ಹೆಗ್ಡೆ ಹಾಗೂ ಆತನ ಸ್ವೇಹಿತ ಅಡಾಲ್ಬೆಟ್ಟು ರಾಜೇಶ್ ಪೂಜಾರಿ ಶಿಕ್ಷೆಗೊಳಗಾದವರು. 2022 ಮಾರ್ಚ್ 12ರಂದು ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಅಡಾಲ್ ಬೆಟ್ಟು ಎಂಬಲ್ಲಿ ಜಯ ಶಂಕರ ಇವರ ಅಕ್ಕ ದಿ. ಲಕ್ಷ್ಮಿ ಶೆಡ್ತಿಯ ಮನೆಯಲ್ಲಿ ಈ ಕೃತ್ಯ ಎಸಗಿದ್ದರು. ಬೀಗ ಹಾಕಿರುವ ಮನೆಯ ಹಿಂದುಗಡೆ ಬಾಗಿಲನ್ನು ಬಲಾತ್ಕಾರವಾಗಿ ದೂಡಿದ ಆರೋಪಿಗಳು ಮನೆಯ ಒಳಗೆ ನುಗ್ಗಿ ಕೋಣಿಯಲ್ಲಿದ್ದ ಗೋದ್ರೆಜ್ನ ಕವಾಟಿನ ಬಾಗಿಲನ್ನು ತೆರೆದು, ಅದರೊಳಗೆ ಚಿನ್ನವಿರಬಹುದು ಶಂಕಿಸಿ ತಡಕಾಡಿ ಬಟ್ಟೆ ಬರೆಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಕೊನೆಗೆ ಏನೂ ಸಿಗದಿದ್ದಾಗ ಅಡುಗೆ ಕೋಣೆಯಲ್ಲಿದ್ದ ಸುಮಾರು 2000 ರೂ. ಮೌಲ್ಯದ ರೆಗುಲೇಟರ್ ಇರುವ ಎರಡು ಒಲೆಯ ಗ್ಯಾಸ್ ಸ್ಟವ್ನ್ನು ಕಳವು ಮಾಡಿದ್ದರು.
ಈ ಕುರಿತು ಅಂದಿನ ಹೆಬ್ರಿ ಪೊಲೀಸ್ ಠಾಣೆಯ ಪಿ.ಎಸ್.ಐ ಸುಮಾ ಬಿ. ಅವರು ಆರೋಪಿಗಳಾದ ರಾಜೇಶ್ ಹೆಗ್ಡೆ, ರಾಜೇಶ್ ಪೂಜಾರಿಯ ವಿರುದ್ಧ ಕಾರ್ಕಳ ನ್ಯಾಯಾಲಯಕ್ಕೆ ದೋಷಾರೋಪಣೆಯನ್ನು ಸಲ್ಲಿಸಿದ್ದರು.
2ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಕಾರ್ಕಳದ ನ್ಯಾಯಾಧೀಶೆ ಚೇತನಾ ಸಿ.ಎಫ್ ಪ್ರಕರಣವನ್ನು ವಿಚಾರಣೆ ನಡೆಸಿದ್ದು, ಹೊಂಚು ಹಾಕಿ ರಾತ್ರಿಯಲ್ಲಿ ಮನೆ ಅತಿಕ್ರಮಣ ಪ್ರವೇಶ ಮಾಡಿರುವುದಕ್ಕೆ 1 ವರ್ಷ ಸಾಧಾರಣ ಸಜೆ ಮತ್ತು ತಲಾ 2000 ರೂ. ತಂಡ ತಪ್ಪಿದ್ದಲ್ಲಿ 1 ತಿಂಗಳ ಸಾಧಾರಣ ಸಜೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ರಾಜಶೇಖರ್ ಪಿ. ಶಾಮರಾವ್ ವಾದಿಸಿದ್ದಾರೆ.