ಮಂಗಳೂರು, ಡಿ 09 (DaijiworldNews/DB): ಬೆಳಗಾವಿಯಲ್ಲಿ ಉದ್ಬವಿಸಿರುವ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಕೂಡಲೇ ಸಮಸ್ಯೆ ಬಗೆ ಹರಿಸಬೇಕು ಎಂದು ಶಾಸಕ ಯು. ಟಿ. ಖಾದರ್ ಆಗ್ರಹಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಗಡಿ ವಿವಾದ ಸಂಬಂಧಿಸಿ ರಾಜ್ಯದ ಮುಖ್ಯಮಂತ್ರಿಗಳು ಯಾವುದೇ ದಿಟ್ಟ ನಿರ್ಧಾರ ಕೈಗೊಳ್ಳದೆ ರಾಜ್ಯದ ಜನತೆಗೆ ದ್ರೋಹ ಬಗೆಯುತ್ತಿದ್ದಾರೆ. ಅಲ್ಲಿನ ಕನ್ನಡಿಗರು ಸಂಕಷ್ಟದಲ್ಲಿದ್ದಾರೆ. ಯಾಕೆ ಗಡಿ ಬಗ್ಗೆ ಸಮರ್ಥ ನಿರ್ಧಾರ ಕೈಗೊಳ್ಳಲಾಗುವುದಿಲ್ಲ ಎಂಬುದನ್ನು ಮುಖ್ಯಮಂತ್ರಿಗಳು ಹೇಳಬೇಕು ಎಂಬುದಾಗಿ ಇದೇ ವೇಳೆ ಅವರು ಒತ್ತಾಯಿಸಿದರು.
ಡಬಲ್ ಎಂಜಿನ್ ಸರ್ಕಾರ ಎಂದು ಹೇಳಿಕೊಳ್ಳುವ ಬಿಜೆಪಿಯವರು ಸಮಸ್ಯೆ ಪರಿಹರಿಸಲು ವಿಫಲವಾಗಿರುವುದು ಯಾಕೆ? ಜನರು ಅಲ್ಲಿ ಸಮಸ್ಯೆಯಲ್ಲಿರುವುದು ಕಾಣಿಸುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಮೌನವಾಗಿರುವುದು ಯಾಕೆ? ಈ ಮೌನ ರಾಜ್ಯದ ಜನತೆಗೆ ದ್ರೋಹ ಬಗೆದಂತೆ. ಸಂಘರ್ಷವನ್ನು ನಿಲ್ಲಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.
ಕಾಂಗ್ರೆಸ್ ಪಕ್ಷವು ಡಾ. ಬಿ. ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನಾಧರಿತವಾಗಿ ಕೆಲಸ ಮಾಡುತ್ತಿದೆ ಎಂದವರು ಇದೇ ವೇಳೆ ತಿಳಿಸಿದರು.
ಅನೈತಿಕ ಪೊಲೀಸ್ಗಿರಿಯ ವಿರುದ್ದ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಆರೋಪಿಗಳ ವಿರುದ್ದ ಪೊಲೀಸರು ಸುಯೋ ಮೋಟೋ ಪ್ರಕರಣ ದಾಖಲಿಸಬೇಕು ಎಂದವರು ಇದೇ ವೇಳೆ ಒತ್ತಾಯಿಸಿದರು.