ಮಂಗಳೂರು,ಮಾ 01 (MSP): ನಗರದ ಸಾರ್ವಜನಿಕರಿಗೆ ಮಾದಕ ವಸ್ತುವಾದ ಎಂಡಿಎಂಎ ಅನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಸುರತ್ಕಲ್ ಚೊಕ್ಕಬೆಟ್ಟು ನಿವಾಸಿ ಮಹಮ್ಮದ್ ಶಫಿಕ್ ಯಾನೆ ಚಪ್ಪಿ ಎಂದು ಗುರುತಿಸಲಾಗಿದೆ. ಈತನಿಂದ 60 ಗ್ರಾಂ ತೂಕದ 1.80 ಲಕ್ಷ ಮೌಲ್ಯದ ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎ (ಮಿಥಿಲಿನ್ ಡಯೋಕ್ಸಿ ಮೆತಂಫೆಟ್ - ಆಮೈನ್) ಹಾಗೂ ಒಂದು ಮೊಬೈಲ್ ನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ಮುಂಬೈಯಿಂದ ಈ ಮಾದಕ ವಸ್ತುವನ್ನು ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮಾದಕ ವಸ್ತು ಮಾರಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ. ಆರೋಪಿ ಹಾಗೂ ವಶಪಡಿಸಿಕೊಂಡ ಸ್ವತ್ತುಗಳನ್ನು ಮುಂದಿನ ಕ್ರಮಕ್ಕಾಗಿ ಸುರತ್ಕಲ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಸಿಸಿಬಿ ಘಟಕದ ಇನ್ಸ್ಪೆಕ್ಟರ್ ಶಾಂತಾರಾಮ, ಸಬ್ ಇನ್ಸ್ಪೆಕ್ಟರ್ಗಳಾದ ಶ್ಯಾಮ್ ಸುಂದರ್, ಕಬ್ಬಾಳ್ ರಾಜ್ ಹಾಗೂ ಸಿಬ್ಬಂದಿ ಈ ದಾಳಿ ನಡೆಸಿದ್ದಾರೆ.