ಉಡುಪಿ, ಡಿ 08 (DaijiworldNews/DB): ಗುಜರಾತ್ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ವಿಜಯ ದಾಖಲಿಸಿರುವುದು ಬಿಜೆಪಿ ಪ್ರಸ್ತುತ ಎಷ್ಟು ಎತ್ತರಕ್ಕೆ ಬೆಳೆದಿದೆ ಎಂಬುದಕ್ಕೆ ಜ್ವಲಂತ ಉದಾಹರಣೆ. ಈ ಗೆಲುವು ಕೇವಲ ಗುಜರಾತಿಗೆ ಮಾತ್ರ ನೀಮಿತವಾಗಿಲ್ಲ. ಕರ್ನಾಟಕದ ಮುಂದಿನ ವಿಧಾನಸಭಾ ಚುನಾವಣೆಗೆಈ ಫಲಿತಾಂಶ ದಿಕ್ಸೂಚಿಯಾಗಲಿದೆ ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಹಾಗೂ ಮೈಸೂರ್ ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಕೆ. ಉದಯ ಕುಮಾರ್ ಶೆಟ್ಟಿ ಹೇಳಿದ್ದಾರೆ.
ಗುಜರಾತ್ ಚುನಾವಣೆಯಲ್ಲಿ ಬಿಜೆಪಿಯ ಭರ್ಜರಿ ಗೆಲುವಿನ ಪ್ರಯುಕ್ತ ಉಡುಪಿ ಜಿಲ್ಲಾ ಬಿಜೆಪಿ ಗುರುವಾರ ಜಿಲ್ಲಾ ಕಚೇರಿ ಬಳಿ ಹಮ್ಮಿಕೊಂಡ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗುಜರಾತ್ ಹಾಗೂ ಕರ್ನಾಟಕ ಅಭಿವೃದ್ಧಿ, ಹಿಂದುತ್ವ ಮುಂತಾದ ವಿಚಾರಗಳಲ್ಲಿ ಸ್ವಾಮ್ಯತೆಯನ್ನು ಹೊಂದಿದೆ. ಈ ಹಿನ್ನಲೆಯಲ್ಲಿ ಜನಾಭಿಪ್ರಾಯದಂತೆ ಕರ್ನಾಟಕದಲ್ಲೂ ಬಿಜೆಪಿ ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಭರ್ಜರಿ ವಿಜಯ ದಾಖಲಿಸಲಿದೆ ಎಂದರು.
ಈಗಾಗಲೇ ಪಕ್ಷದ ಹಿರಿಯರು ಹಾಗೂ ರಾಷ್ಟ್ರೀಯ ಮತ್ತು ರಾಜ್ಯ ಘಟಕದ ಯೋಜನೆಯಂತೆ 150ಕ್ಕೂ ಮಿಕ್ಕಿ ಸ್ಥಾನಗಳನ್ನು ಗೆಲ್ಲುವ ಗುರಿಯೆಡೆಗೆ ಪೂರ್ಣ ಪ್ರಮಾಣದ ತಯಾರಿ ಪ್ರಗತಿಯಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು ಹಾಗೂ ಅಭಿವೃದ್ಧಿಪರ ಆಡಳಿತದ ಪ್ರತಿಫಲನದ ಗುಜರಾತ್ ಚುನಾವಣಾ ಫಲಿತಾಂಶ ಕರ್ನಾಟಕದ ಗುರಿಯನ್ನು ತಲುಪಲು ಇನ್ನಷ್ಟು ಪ್ರೇರಣೆ ನೀಡಲಿದೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಗೀತಾಂಜಲಿ ಎಂ. ಸುವರ್ಣ ಮಾತನಾಡಿ, ಬಿಜೆಪಿ ಗುಜರಾತ್ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಸಾಧನೆಗೈದಿದೆ. ಪ್ರಧಾನಿ ನರೇಂದ್ರ ಮೋದಿಯವರು ಹಾಕಿಕೊಟ್ಟ 'ಸಬ್ ಕೇ ಸಾಥ್ ಸಬ್ ಕಾ ವಿಕಾಸ್' ಎಂಬ ತತ್ವದ ಚಿಂತನೆಗಳು ಸಾಕಾರಗೊಂಡ ಫಲವಿದು. ಅಭಿವೃದ್ಧಿ ಮತ್ತು ಹಿಂದುತ್ವದ ಪರ ಬಿಜೆಪಿ ಬೆಂಬಲಿಸಿದ ಗುಜರಾತ್ ಜನತೆಯ ನಿಲುವು ಅಭಿನಂದನೀಯ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನೋಹರ್ ಎಸ್. ಕಲ್ಮಾಡಿ, ಪ್ರಕೋಷ್ಠಗಳ ರಾಜ್ಯ ಸಮಿತಿ ಸದಸ್ಯ ಅಂಡಾರು ದೇವಿಪ್ರಸಾದ್ ಶೆಟ್ಟಿ, ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ಸಲೀಂ ಅಂಬಾಗಿಲು, ಬಿಜೆಪಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಕಾರ್ಯದರ್ಶಿ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಷ್ಮಿತಾ ಬಿ. ಶೆಟ್ಟಿ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ದಾವೂದ್ ಅಬೂಬಕರ್, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರಾದ ವಿಜಯ ಕುಮಾರ್ ಉದ್ಯಾವರ, ಜಗದೀಶ್ ಆಚಾರ್ಯ ಕಪ್ಪೆಟ್ಟು, ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಚಂದ್ರಶೇಖರ ಪ್ರಭು, ಬಿಜೆಪಿ ಉಡುಪಿ ನಗರ ಯುವ ಮೋರ್ಚಾ ಅಧ್ಯಕ್ಷ ರೋಶನ್ ಶೆಟ್ಟಿ, ಪ್ರಮುಖರಾದ ದಿನಕರ ಪೂಜಾರಿ, ಸಂತೋಷ್ ಆಚಾರ್ಯ, ಗುರುಪ್ರಸಾದ್, ಪ್ರಶಾಂತ್ ಭಟ್ ಪೆರಂಪಳ್ಳಿ, ರಾಧಾಕೃಷ್ಣ ಶೆಟ್ಟಿ, ರಾಘವೇಂದ್ರ ಭಟ್, ಪ್ರಣವ್, ಗಗನ್, ಶ್ರೀವಾತ್ಸ ಮತ್ತಿತರರು ಉಪಸ್ಥಿತರಿದ್ದರು.