ಉಳ್ಳಾಲ ಅ 31: ಹಿಂದೆ ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದ ಸಂದರ್ಭ ಧರ್ಮಸ್ಥಳ ಭೇಟಿ ನೀಡಿದ್ದಾಗ , ವಿಶೇಷ ವಿಮಾನದ ಮೂಲಕ ಅಥವಾ ಕಾರ್ಯವಾಗಲಿ , ಹೆಚ್ಚುವರಿ ಹೆಲಿಕಾಪ್ಟರ್ ಗಳಾಗಲಿ ಬಂದಿರಲಿಲ್ಲ, ಸರಳ ಜೀವನದ ಜತೆಗೆ ಬಡಜನರಿಗೆ ಬೇಕಾದ ರೀತಿಯಲ್ಲಿ ಆಡಳಿತ ನಡೆಸಿದಂತಹ ಇಂದಿರಾಗಾಂಧಿ ಅವರ ಕಾರ್ಯಚಟುವಟಿಕೆಗಳು ದೇಶಕ್ಕೆ ಮಾದರಿ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಅವರು ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ತೊಕ್ಕೊಟ್ಟು ಬಸ್ಸು ನಿಲ್ದಾಣದ ಬಳಿ ಪುಣ್ಯತಿಥಿಯ ಅಂಗವಾಗಿ ಶಾಂತಿ ಸಹೋದರತೆ ಹಾಗೂ ಸಹಿಷ್ಣುತೆಗಾಗಿ ಮಂಗಳವಾರ ಹಮ್ಮಿಕೊಳ್ಳಲಾದ ಜನಜಾಗೃತಿ ಹಾಗೂ ನಾಡಿನ ಮತೀಯ ಸಾಮರಸ್ಯಕ್ಕಾಗಿ ‘ ಸದ್ಭಾವನಾ ಉಪವಾಸ ಸತ್ಯಾಗ್ರಹ ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇಂದಿರಾ ಗಾಂಧಿಯವರು ದೇಶ ಕಂಡ ಅತ್ಯುತ್ತಮ ಪ್ರಧಾನಿ. ಗರೀಬಿ ಹಠಾವೋ, ನ್ಯಾಯಬೆಲೆ ಅಂಗಡಿಯ ಸ್ಥಾಪಕರು. ಅಂತಹ ಮೇರು ವ್ಯಕ್ತಿತ್ವದ ಪ್ರಧಾನಿಯ ಹೆಸರಿನಲ್ಲಿ ಇಂದಿನ ಸರಕಾರ ಇಂದಿರಾ ಕ್ಯಾಂಟೀನ್ ಸ್ಥಾಪಿಸಿ ಬಡ ಜನರ ಹಸಿವುಮುಕ್ತಕ್ಕೆ ಯೋಜನೆ ರೂಪಿಸಿದೆ. ಬಸ್ಸುಗಳಿಲ್ಲದ ಸಂದರ್ಭ ಬಸ್ ವ್ಯವಸ್ಥೆಯನ್ನೇ ರಾಷ್ಟ್ರೀಕರಣಗೊಳಿಸಿದ್ದು ಅಲ್ಲದೆ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿರುವ ಮೂಲಕ ದೇಶದಲ್ಲಿ ಕ್ರಾಂತಿಕಾರಿ ಬದಲಾವಣೆ ರೂಪಿಸಿದವರು. ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿದ್ದ ಗಲಭೆಗಳನ್ನು ನಿಯಂತ್ರಿಸಿದ ಮಹಿಳಾ ಪ್ರಧಾನಿಯವರು ಅದೇ ವಿಚಾರದಲ್ಲಿ ಅಂಗರಕ್ಷಕನಿಂದಲೇ ಹತ್ಯೆಗೊಳಗಾದರು. ಗುಪ್ತಚರ ಇಲಾಖೆ ಅಂಗರಕ್ಷಕನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರೂ, 15 ವರ್ಷಗಳಿಂದ ತನ್ನ ಜತೆಗಿದ್ದ ಅಂಗರಕ್ಷಕನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿ ತಮ್ಮ ಜತೆಗೆಯೇ ಇರಿಸಿದ ಹಿನ್ನೆಲೆಯಲ್ಲಿ ಹತ್ಯೆಗೀಡಾದರು. ಇಂದಿನ ಪ್ರಧಾನಿಯವರು ಅಮೆರಿಕಾದ ಜನಪ್ರತಿನಿಧಿಯಂತೆ ವಿಮಾನದ ಮೂಲಕ ಐಷಾರಾಮಿ ಕಾರು ತರಿಸಿ, ವಿಶೇಷ ಹೆಲಿಕಾಪ್ಟರ್ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳುತ್ತಾರೆ. ಅದೇ ಹಿಂದೆ ಇಂದಿರಾ ಗಾಂಧಿಯವರು ಯಾವುದೇ ಕಾರು ತರಿಸಿದವರಲ್ಲ. ಮೊದಲು ಅಮೆರಿಕಾದಂತಹ ಅಭಿವೃದ್ಧಿಯನ್ನು ಮಾಡುವ ಬದಲು ಅಲ್ಲಿನ ಜನಪ್ರತಿನಿಧಿಯಂತೆ ವರ್ತಿಸುವ ಮನಸ್ಥಿತಿಯನ್ನು ಬದಲಾಯಿಸಲಿ ಎಂದರು.
ರಾಜ್ಯ ಸರಕಾರದ ಮುಖ್ಯಸಚೇತಕ ಐವನ್ ಡಿಸೋಜ ಮಾತನಾಡಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸ್ವಾಭಿಮಾನದ ಬದುಕು ರೂಪಿಸಿದವರು. ತೊಕ್ಕೊಟ್ಟುವಿನಲ್ಲಿ ಅವರ ಪುಣ್ಯತಿಥಿಯ ಅಂಗವಾಗಿ ಆರಂಭಗೊಂಡ ಉಪವಾಸ ಕಾರ್ಯಕ್ರಮ ಪ್ರಪಂಚದಾದ್ಯಂತ ನಡೆಯಲಿ, ಈ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಲಿ ಎಂದರು.
ರಾಜ್ಯ ಇಂಟಕ್ ಅಧ್ಯಕ್ಷ ರಾಕೇಶ್ ಮಲ್ಲಿ, ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಉಪಾಧ್ಯಕ್ಷ ಯು.ಕಣಚೂರು ಮೋನು, ಎಂ.ಎ.ಗಫೂರ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಎನ್.ಎಸ್.ಕರೀಂ,ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೈನ್ ಕುಂಞಿಮೋನು, ಬಾಝಿಲ್ ಡಿಸೋಜ, ಮೋನು ಮಲಾರ್, ಮುಸ್ತಾಫ ಹರೇಕಳ, ಲುಕ್ಮಾನ್, ಮಮತಾ ಡಿ.ಎಸ್ ಗಟ್ಟಿ, ಪಿ.ಎಂ.ಕುಂಞಿ, ಮನೋಹರ ಶೆಟ್ಟಿ, ಸೇವಾದಳದ ಅಶ್ರಫ್, ಯು.ಬಿ.ಸಲೀಂ, ಫಾರುಕ್ ಉಳ್ಳಾಲ್, ಮುರಳೀಧರ್ , ಉಮ್ಮರ್ ಪಜೀರ್, ನಝರ್ ಷಾ ಮೊದಲಾದವರು ಉಪಸ್ಥಿತರಿದ್ದರು.