ಮಂಗಳೂರು,ಡಿ 08( DaijiworldNews/MS): ಸೂರ್ಯನ ಸುತ್ತ ದೀರ್ಘ ವೃತ್ತಾಕಾರದ ಕಕ್ಷೆಯಲ್ಲಿ ಸುತ್ತುತ್ತಿರುವ ಮಂಗಳ ಗ್ರಹವು ಡಿ.8ರಂದು ಭೂಮಿಗೆ ಸನಿಹದಲ್ಲಿದ್ದು, ಪ್ರಕಾಶಮಾನವಾಗಿರುತ್ತದೆ.
ಪಶ್ಚಿಮ ಆಕಾಶದಲ್ಲಿ ಸೂರ್ಯಾಸ್ತವಾಗುತ್ತಲೇ ಪೂರ್ವ ದಿಕ್ಕಿನಲ್ಲಿ ಮಂಗಳ ಗ್ರಹ ಉದಯವಾಗುತ್ತದೆ. ಅಂದು ಸಂಜೆ 7 ಗಂಟೆಗೆ ಪೂರ್ವಾಕಾಶದಲ್ಲಿ ಸುಮಾರು 15 ಡಿಗ್ರಿ ಎತ್ತರದಲ್ಲಿ ಹುಣ್ಣಿಮೆ ಚಂದ್ರನ ಮೇಲ್ಗಡೆ ವೃಶ್ಚಿಕ ರಾಶಿಯಲ್ಲಿ ಮಂಗಳ ಗ್ರಹ ಕಾಣಬಹುದು.
ಈ ವಿದ್ಯಮಾನವನ್ನು ವೀಕ್ಷಿಸಲು ಡಿ.8ರಂದು ಸಂಜೆ 6ಗಂಟೆಯಿಂದ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ ವಿಶೇಷ ಆಕಾಶ ವೀಕ್ಷಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮಂಗಳ, ಗುರು ಮತ್ತು ಶನಿ ಗ್ರಹ ಹಾಗೂ ಹುಣ್ಣಿಮೆ ಚಂದ್ರನನ್ನು ದೂರದರ್ಶಕದ ಮೂಲಕ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ನಕ್ಷತ್ರ ಮತ್ತು ನಕ್ಷತ್ರ ಪುಂಜಗಳನ್ನು ಪರಿಚಯಿಸಲಾಗುವುದು. ವೀಕ್ಷಕರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದೆ.