ಕುಂದಾಪುರ, ಡಿ 08( DaijiworldNews/MS): ನ್ಯೂಜಿಲ್ಯಾಂಡ್ನ ಆಕ್ಲಂಡ್ನಲ್ಲಿ ನಡೆದ ಕಾಮನ್ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ನಲ್ಲಿ ಭಾರತವನ್ನು ಪ್ರತಿನಿಧಿಸಿ, ಚಿನ್ನದ ಪದಕ ವಿಜೇತರಾಗಿ, ಇದೇ ಮೊದಲ ಬಾರಿಗೆ ಹುಟ್ಟೂರಿಗೆ ಆಗಮಿಸಿದ ಸತೀಶ್ ಖಾರ್ವಿಯವರಿಗೆ ಬುಧವಾರ ಕುಂದಾಪುರದದಲ್ಲಿ ಅದ್ಧೂರಿಯಾದ ಸ್ವಾಗತ ನೀಡಲಾಯಿತು.
ಧರ್ಮಸ್ಥಳದಲ್ಲಿ ಬುಧವಾರ ಬೆಳಗ್ಗೆ ದೇವರ ದರ್ಶನ ಪಡೆದುಕೊಂಡು, ಧರ್ಮಾಧಿಕಾರಿ ಡಾ| ವೀರೇಂದ್ರ ಡಿ. ಹೆಗ್ಗಡೆ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದು, ಕುಂದಾಪುರಕ್ಕೆ ಆಗಮಿಸಿದ ಸತೀಶ್ ಖಾರ್ವಿ ಅವರನ್ನು ನಗರದ ಶಾಸ್ತ್ರಿ ಸರ್ಕಲ್ ಬಳಿಯಲ್ಲಿ ತಾಲೂಕು ಆಡಳಿತ, ವಿವಿಧ ಸಂಘ-ಸಂಸ್ಥೆಗಳು, ಕೊಂಕಣಿ ಖಾರ್ವಿ ಸಮಾಜ ಬಂಧುಗಳು, ಸಾರ್ವಜನಿಕರು ಹಾಗೂ ಅಭಿಮಾನಿಗಳ ಪರವಾಗಿ ಸಾರ್ವಜನಿಕವಾಗಿ ಅಭಿನಂದಿಸಲಾಯಿತು.
ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿಯಿಂದ ಅಲಂಕೃತ ವಾಹನದಲ್ಲಿ ನಗರದ ಪ್ರಮುಖ ರಸ್ತೆಯಲ್ಲಿ ಚೆಂಡೆ, ವಾದ್ಯಗಳ ಮೂಲಕ ವೈಭವದ ಮೆರವಣಿಗೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಾ| ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ| ಕೊತ್ತಾಡಿ ಉಮೇಶ್ ಶೆಟ್ಟಿ, ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಗೆದ್ದು, ಭಾರತ ಹಾಗೂ ಕುಂದಾಪುರದ ಕೀರ್ತಿ ಪತಾಕೆಯನ್ನು ಹೆಚ್ಚಿಸಿದ ಸತೀಶ್ ಖಾರ್ವಿಯವರಿಗೆ ಅಭಿನಂದನೆಗಳು. ನಿಮ್ಮಿಂದ ಇನ್ನಷ್ಟು ಸಾಧನೆಗಳು ಹೊರಹೊಮ್ಮಲಿ. ದೇಶದ ಹಿರಿಮೆಯನ್ನು ಹೆಚ್ಚಿಸಿದ ಸಾಧಕನ ಸಮ್ಮಾನಿಸುವುದು ನಮ್ಮೆಲ್ಲರಿಗೂ ಹೆಮ್ಮೆಯ ಕ್ಷಣ ಎಂದರು.
ಉದ್ಯಮಿಗಳಾದ ರವಿ ಟಿ. ನಾಯ್ಕ್, ಶ್ರೀಶನ್ ಮಾತನಾಡಿದರು.
ಪುರಸಭೆ ಸದಸ್ಯರಾದ ಶೇಖರ ಪೂಜಾರಿ, ವಿ. ಪ್ರಭಾಕರ, ತಾಲೂಕು ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ, ನಿವೃತ್ತ ಬ್ಯಾಂಕ್ ಉದ್ಯೋಗಿ ಸುಭಾಷ್ ಖಾರ್ವಿ, ಮತ್ತಿತರರು ಉಪಸ್ಥಿತರಿದ್ದರು.
ಪುರಸಭೆಯ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಟಿ ಜೇಸಿಐ ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ ಸ್ವಾಗತಿಸಿ, ಹರ್ಷವರ್ಧನ್ ಖಾರ್ವಿ ಕಾರ್ಯಕ್ರಮ ನಿರೂಪಿಸಿದರು.
ಚಳಿಯಿಂದ ದಾಖಲೆ ಕೈತಪ್ಪಿತು..
ಡೆಡ್ಲಿಫ್ಟ್ನಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದ ನನಗೆ, ಕಾಮನ್ವೆಲ್ತ್ನಲ್ಲೂ ವೈಯಕ್ತಿಕ ದಾಖಲೆ ನಿರ್ಮಿಸಬೇಕೇಂಬ ಹಂಬಲವಿತ್ತು. ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿದ್ದೆ. ಆದರೆ ಅಲ್ಲಿ ವಿಪರೀತ ಚಳಿಯಿಂದಾಗಿ ಭಾರ ಎತ್ತಲು ಸಾಧ್ಯವಾಗಲಿಲ್ಲ. ಇದರಿಂದ ವೈಯಕ್ತಿಕ ದಾಖಲೆ ಕೈ ತಪ್ಪಿ ಹೋಯಿತು. ಆದರೂ ಬೆಂಚ್ ಪ್ರೆಸ್ನಲ್ಲಿ ತಲಾ 1 ಚಿನ್ನ, ಬೆಳ್ಳಿ ಹಾಗೂ ಪವರ್ ಲಿಫ್ಟಿಂಗ್ನಲ್ಲಿ 4ಚಿನ್ನದ ಪದಕ ಗೆದ್ದಿರುವುದು ಖುಷಿ ಕೊಟ್ಟಿದೆ. ನಿಮ್ಮ ಅಭಿಮಾನಕ್ಕೆ ಚಿರಋಣಿ.
- ಸತೀಶ್ ಖಾರ್ವಿ, ಕಾಮನ್ವೆಲ್ತ್ ಪವರ್ ಲಿಫ್ಟಿಂಗ್ ಪದಕ ವಿಜೇತ