ಮಂಗಳೂರು, ಡಿ 07( DaijiworldNews/MS): ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮತಗಟ್ಟೆ ಅಧಿಕಾರಿಗಳು ಹಾಗೂ ತಹಶೀಲ್ದಾರರು ಹೆಚ್ಚಿನ ಮತದಾರರನ್ನು ನೋಂದಾಯಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮತದಾರರ ಪಟ್ಟಿ ವೀಕ್ಷಕರು ಆಗಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ. ಪೊನ್ನುರಾಜ್ ಅವರು ತಿಳಿಸಿದರು.
ಅವರು ಡಿ. 7ರ ಬುಧವಾರ ನಗರದ ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕುರಿತಂತೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಂತಿಮ ಮತದಾರ ಪಟ್ಟಿ 2023ರ ಜನವರಿ 5ರಂದು ಪ್ರಕಟವಾಗಲಿದೆ, ಪರಿಷ್ಕರಣೆ ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆಯುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕು, ಮತದಾರರು ಮರಣ ಹೊಂದಿದ್ದರೆ ಅವರ ಮರಣ ಪ್ರಮಾಣ ಪತ್ರವನ್ನು ಪಡೆಯಬೇಕು ಹಾಗೂ ಸ್ಥಳಾಂತರಗೊಂಡ ಮತದಾರರ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು, ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಪಟ್ಟಿಯನ್ನು ತೆಗೆದುಕೊಂಡು ಅವರ ಜನ್ಮ ದಿನಾಂಕವನ್ನು ಪರಿಶೀಲಿಸಿ, ಅರ್ಹರಿದ್ದರೆ ಮತದಾರರ ಪಟ್ಟಿಗೆ ಅವರನ್ನು ಸೇರ್ಪಡೆ ಮಾಡುವ ಕೆಲಸವನ್ನು ಮಾಡಬೇಕು, ಈ ಬಗ್ಗೆಯೂ ಸ್ವೀಪ್ ಸಮಿತಿ ವತಿಯಿಂದ ಹಲವು ಚಟುವಟಿಕೆಗಳನ್ನು ಕೈಗೊಂಡು ವ್ಯಾಪಕವಾಗಿ ಜಾಗೃತಿ ಮೂಡಿಸುವ ಮೂಲಕ ಮತದಾರರ ಪಟ್ಟಿಗೆ ಹೆಸರುಗಳು ಹೆಚ್ಚು ದಾಖಲಾಗುವಂತೆ ಮಾಡಬೇಕು ಹಾಗೂ ಸ್ಥಳೀಯ ಕೇಬಲ್ ಟಿವಿ ಗಳಲ್ಲಿ ರಾಜಕೀಯ ಮುಖಂಡರ ಚರ್ಚಾ ಗೋಷ್ಠಿಯನ್ನು ಹಮ್ಮಿಕೊಳ್ಳುವ ಬಗ್ಗೆ ಸಲಹೆ ನೀಡಬೇಕೆಂದು ನಿರ್ದೇಶನಗಳನ್ನು ನೀಡಿದರು.
ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಸಹಾಯಕ ಆಯುಕ್ತರಾದ ಮದನ್ ಮೋಹನ್ ಹಾಗೂ ಗಿರೀಶ್ ನಂದನ್ ವೇದಿಕೆಯಲ್ಲಿದ್ದರು.
ಚುನಾವಣಾ ಕಾರ್ಯಕ್ಕೆ ನಿಯೋಜಿತ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.