ಕುಂದಾಪುರ, ಡಿ 07 (DaijiworldNews/DB): ಪದವಿ ಪೂರ್ವ ಶಿಕ್ಷಣ ಇಲಾಖೆ, ಸುಣ್ಣಾರಿ ಸುಜ್ಞಾನ್ ಎಜುಕೇಶನ್ ಟ್ರಸ್ಟ್-ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟ ಡಿ. 8ರಿಂದ ಡಿ.10 ತನಕ ಸುಣ್ಣಾರಿಯ ಎಕ್ಸಲೆಂಟ್ ಕಾಲೇಜು ಆವರಣದಲ್ಲಿ ನಡೆಯಲಿದ್ದು ಟ್ರೋಫಿ ಅನಾವರಣ ಕಾರ್ಯಕ್ರಮ ಇಂದು ನಡೆಯಿತು.
ಹಿಂದುಳಿದ ವರ್ಗಗಳ ಅಭಿವೃದ್ದಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಟ್ರೋಫಿ ಅನಾವರಣಗೊಳಿಸಿ ಮಾತನಾಡಿ, ಸುಣ್ಣಾರಿಯ ಎಕ್ಸಲೆಂಟ್ ಸಂಸ್ಥೆಯ ಆತಿಥ್ಯದಲ್ಲಿ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟವನ್ನು ವ್ಯವಸ್ಥಿತವಾಗಿ ಏರ್ಪಡಿಸುತ್ತಿರುವುದು, ರಾಜ್ಯದ 31 ಜಿಲ್ಲೆಯ ಕ್ರೀಡಾಳುಗಳು ಆಗಮಿಸುತ್ತಿರುವುದು ರಾಜ್ಯಕ್ಕೆ ಕುಂದಾಪುರ ಮೂಲಕ ಗೌರವ ಬರುತ್ತದೆ. ಭಾಗವಹಿಸುವ ಕ್ರೀಡಾಳುಗಳಿಗೆ ಸೂಕ್ತ ಮೂಲಭೂತ ಸೌಕರ್ಯಗಳ ಒದಗಿಸುವಿಕೆ ಸೇರಿದಂತೆ ಅತ್ಯಂತ ವ್ಯವಸ್ಥಿತವಾಗಿ ವಾಲಿಬಾಲ್ ಪಂದ್ಯಾಟಕ್ಕೆ ಅಚ್ಚುಕಟ್ಟಾಗಿ ಸಿದ್ಧತೆಗಳನ್ನು ಮಾಡಿಕೊಂಡಿದೆ. ಯಶಸ್ವಿಯಾಗಿ ಪಂದ್ಯಾಟ ಜರಗಲಿ, ಸರ್ಕಾರ ನಿಮ್ಮೊಂದಿಗೆ ಇರುತ್ತದೆ ಎಂದು ಶುಭ ಹಾರೈಸಿದರು.
ಸುಜ್ಞಾನ್ ಎಜುಕೇಶನ್ ಟ್ರಸ್ಟ್-ಎಕ್ಸಲೆಂಟ್ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಡಾ. ರಮೇಶ ಶೆಟ್ಟಿ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಆಯೋಜಿಸಲಾಗುತ್ತಿರುವ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಜಿಲ್ಲೆಯ ಎಲ್ಲಾ ರಾಜಕೀಯ ನೇತಾರರ ಸಹಕಾರ ದೊರಕಿದೆ. ಸಣ್ಣ ಕಾಲೇಜು ದೊಡ್ಡ ಕಾರ್ಯಕ್ರಮದ ಜವಾಬ್ದಾರಿ ತಗೆದುಕೊಂಡಿದ್ದೇವೆ. ಅದಕ್ಕೆ ಎಲ್ಲರ ಸಹಕಾರ ಬೇಕು ಎಂದರು.
ಟ್ರಸ್ಟ್ ಕೋಶಾಧಿಕಾರಿ ಭರತ್ ಶೆಟ್ಟಿ ಮಾತನಾಡಿ, ಉಡುಪಿ ಜಿಲ್ಲೆಯ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಪದವಿ ಪೂರ್ವ ವಿಭಾಗ ವಾಲಿಬಾಲ್ ಪಂದ್ಯಾಟ ನಡೆಯುತ್ತಿದೆ. ಡಿ. 8ರಂದು ಸಂಜೆ 5 ಗಂಟೆಗೆ ವಾಲಿಬಾಲ್ ಪಂದ್ಯಾಟದ ಉದ್ಘಾಟನೆ ನಡೆಯಲಿದೆ. ಸಚಿವರಾದ ಶ್ರೀನಿವಾಸ ಪೂಜಾರಿಯವರು ವಾಲಿಬಾಲ್ ಪಂಟ್ಯಾಟ ನಿಗದಿಯಾದ ದಿನದಿಂದ ಇಲ್ಲಿಯ ತನಕ ಸಲಹೆ ಸೂಚನೆಗಳನ್ನು ನೀಡುತ್ತಾ ಬಂದಿದ್ದಾರೆ. ಇವತ್ತು ಕೂಡಾ ಸಾಕಷ್ಟು ಕಾರ್ಯಒತ್ತಡ ಇದ್ದರೂ ಕೂಡಾ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಎಂದರು.
ಮಹೇಶ ಹೆಗ್ಡೆ ಮೊಳಹಳ್ಳಿ ಉಪಸ್ಥಿತರಿದ್ದರು.