ಕಾಸರಗೋಡು, ಡಿ 07 (DaijiworldNews/DB): ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಮೊಹಮ್ಮದ್ ಶಾರೀಕ್ ಕೇರಳದ ಕೊಚ್ಚಿಯ ಎಂಟು ವಸತಿಗೃಹಗಳಲ್ಲಿ ತಂಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಎನ್ಐಎ ತನಿಖಾ ತಂಡವು ಕೇರಳಕ್ಕೆ ತೆರಳಿ ಎಂಟು ವಸತಿ ಗೃಹಗಳಿಗೆ ತೆರಳಿ ಅಲ್ಲಿ ಮಾಹಿತಿ ಸಂಗ್ರಹ ಮಾಡಿದೆ.
ಆಲುವಾ ರೈಲು ನಿಲ್ದಾಣ, ಎರ್ನಾಕುಳಂ, ನಾರ್ತ್ ರೈಲ್ವೇ ಸ್ಟೇಶನ್ ಪರಿಸರದಲ್ಲಿರುವ ಎಂಟು ವಸತಿಗೃಹಗಳಲ್ಲಿ ಶಾರೀಕ್ ತಂಗಿದ್ದ ಎಂಬ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ತನಿಖಾ ತಂಡ ಈ ಪರಿಸರದಲ್ಲಿ ತೀವ್ರ ತನಿಖೆಯನ್ನು ನಡೆಸಿದೆ. ಇನ್ನು ಎಂಟು ವಸತಿಗೃಹಗಳಲ್ಲಿಯೂ ತಲಾ ಎರಡರಿಂದ ನಾಲ್ಕು ದಿನಗಳ ಕಾಲ ತಂಗಿ ಮತ್ತು ವಾಸಸ್ಥಳ ಬೇರೆ ವಸತಿಗೃಹಕ್ಕೆ ಬದಲಾಯಿಸುತ್ತಿದ್ದ.
ಅಲ್ಲದೆ ಅಲ್ಲಿನ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದೆ. ಇನ್ನು ಆತ ತಂಗಿದ್ದ ವಸತಿಗೃಹಗಳಲ್ಲಿನ ಗ್ರಾಹಕರ ದಾಖಲೆಗಳನ್ನು ಪರಿಶೀಲಿಸಿದಾಗ ಶಾರೀಕ್ಗೆ ನಿರಂತರವಾಗಿ ಪಾರ್ಸೆಲ್ ಬರುತ್ತಿದ್ದುದು ತಿಳಿದು ಬಂದಿದೆ. ಆದರೆ ಈ ಪಾರ್ಸೆಲ್ಗಳನ್ನು ಯಾವ ಪ್ರದೇಶದಿಂದ ಆತನಿಗೆ ಕಳುಹಿಸಿಕೊಡಲಾಗಿತ್ತು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗದ ಕಾರಣ ಇದನ್ನು ಕಂಡು ಹಿಡಿಯಲು ತಂಡ ಹೆಚ್ಚಿನ ತನಿಖೆಗೆ ಮುಂದಾಗಿದೆ.
ಕೊಚ್ಚಿಯ ಪೋರ್ಟ್ ಕೊಚ್ಚಿ ಮುನಬಂನಲ್ಲಿ ತಂಗಿದ್ದ ವೇಳೆ ಆತ ಬೇರೆಯವರನ್ನು ಭೇಟಿಯಾಗಿ ಮಾತುಕತೆಯನ್ನೂ ನಡೆಸಿದ್ದ ಎಂಬುದು ತಂಡಕ್ಕೆ ಗೊತ್ತಾಗಿದ್ದು, ಯಾರೊಂದಿಗೆಲ್ಲ ಮಾತನಾಡಿದ್ದಾನೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.
ಆಲುವಾದ ವಸತಿ ಗೃಹವೊಂದರಲ್ಲಿ ಆತ ತಂಗಿ ಸ್ವಲ್ಪ ದಿನದಲ್ಲೇ ಅಲ್ಲಿಂದ ಕೊಠಡಿ ಖಾಲಿ ಮಾಡಿ ತೆರಳಿದ್ದ ಬಳಿಕ ಆತನ ಹೆಸರಿಗೆ ಅಲ್ಲಿಗೆ ಪಾರ್ಸೆಲ್ ಬಂದಿತ್ತು. ಆತನ ಹೆಸರಿಗೆ ಬಂದ ಕಾರಣ ಕೂಡಲೇ ವಸತಿಗೃಹ ಸಿಬಂದಿ ಫೋನ್ ಮೂಲಕ ತಿಳಿಸಿದ್ದ ಹಿನ್ನೆಲೆಯಲ್ಲಿ ಮರಳಿ ಬಂದು ಆತ ಆ ಪಾರ್ಸೆಲ್ನ್ನು ಕೊಂಡೊಯ್ದಿದ್ದ ಎಂದು ತಿಳಿದು ಬಂದಿದೆ. ಇನ್ನು ಭಯೋತ್ಪಾದಕ ಚಟುವಟಿಕೆಗೆ ಹಣಕಾಸು ಹೊಂದಿಸಲು ಆಗಾಗ ಕೇರಳಕ್ಕೆ ಹೋಗುತ್ತಿದ್ದ ಎಂದೂ ಮಾಹಿತಿ ಲಭಿಸಿದೆ ಎನ್ನಲಾಗಿದೆ.