ಮಂಗಳೂರು, ಡಿ 06 (DaijiworldNews/HR): ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರ ಅಧ್ಯಕ್ಷತೆಯಲ್ಲಿ ಡಿ.6ರ ಮಂಗಳವಾರ ನಗರದ ಜಿಲ್ಲಾ ಪಂಚಾಯತ್ನ ಮಿನಿ ಸಭಾಂಗಣದಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಮತದಾರರ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಯವರು, ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಕರಡು ಮತದಾರ ಪಟ್ಟಿಯನ್ನು 2022ರ ನವೆಂಬರ್ 9 ರಂದು ಪ್ರಕಟಿಸಲಾಗಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಡಿಸೆಂಬರ್ 9 ಕೊನೆಯ ದಿನಾಂಕವಾಗಿರುತ್ತದೆ, ಪೂರಕ ದಾಖಲೆಗಳನ್ನು ಹಾಜರುಪಡಿಸಿ ನಮೂನೆ-6ರಲ್ಲಿ ಸಲ್ಲಿಸುವ ಮೂಲಕ ಮತದಾರರ ಪಟ್ಟಿಗೆ ಹೆಸರನ್ನು ಸೇರಿಸಬಹುದಾಗಿದೆ, ಅಲ್ಲದೇ ಲಿಂಗತ್ವ ಅಲ್ಪಸಂಖ್ಯಾತರ ಇನ್ನಿತರೆ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಸರ್ಕಾರದ ವಿವಿಧ ಇಲಾಖೆಗಳಿಂದ ಒದಗಿಸಲಾಗುವ ಸೌಲಭ್ಯಗಳ ಕುರಿತು ಲಿಂಗತ್ವ ಅಲ್ಪಸಂಖ್ಯಾತರೊಂದಿಗೆ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯನ್ನು ನಡೆಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ಮಾತನಾಡಿ, ಆಧಾರ್ ಕಾರ್ಡ್ ಮತ್ತು ವಾಸಸ್ಥಳದ ಮಾಹಿತಿ ಇದ್ದಲ್ಲಿ ಪೋರ್ಟಲ್ ಮುಖಾಂತರ ಸುಲಭವಾಗಿ ಮತದಾರರ ಪಟ್ಟಿಯಲ್ಲಿ ನೋಂದಾಯಿಸಬಹುದಾಗಿದೆ ಎಂದು ತಿಳಿಸಿದರು.
ಸ್ವೀಪ್ ಸಮಿತಿ ಸದಸ್ಯರು,ಮತದಾರರ ಪಟ್ಟಿಯಲ್ಲಿ ಈಗಾಗಲೇ ನೋಂದಣಿಯಾಗಿರುವ ಜಿಲ್ಲೆಯ ಲಿಂಗತ್ವ ಅಲ್ಪಸಂಖ್ಯಾತರು ಹಾಜರಿದ್ದರು.