ಬಂಟ್ವಾಳ, ಡಿ. 05 (DaijiworldNews/SM) : ತನ್ನ ನಾಲ್ಕುವರೆ ವರ್ಷದ ಅಧಿಕಾರದ ಅವಧಿಯಲ್ಲಿ ಅಭಿವೃದ್ಧಿ ಜೊತೆಗೆ ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಿದ್ದು, ಸುಮಾರು 1800 ಕೋಟಿ ರೂ ವೆಚ್ಚದ ವಿವಿಧ ಮೂಲಸೌಕರ್ಯಗಳ ಅಭಿವೃದ್ಧಿ ಗೆ ಹೆಚ್ಚಿನ ಅಭಿವೃದ್ಧಿ ಗೆ ಒತ್ತು ನೀಡಿದ್ದೇನೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದ್ದಾರೆ.
ಅವರು ಬಿಸಿರೋಡು ನೂತನ ಪ್ರೆಸ್ ಕ್ಲಬ್ ನಲ್ಲಿ ನಡೆದ ಪ್ರಥಮ ಪತ್ರಿಕಾಗೋಷ್ಠಿಯಲ್ಲಿ ಉದ್ದೇಶಿಸಿ ಮಾತನಾಡಿದರು.
ಕ್ಷೇತ್ರದ ಸರ್ವಾಂಗೀಣ ರೀತಿಯ ಅಭಿವೃದ್ಧಿಯ ಜೊತೆ ಕ್ಷೇತ್ರದ ಜನತೆಯ ನಿರೀಕ್ಷೆಗೆ ಚ್ಯುತಿ ಬರದ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ರಸ್ತೆ, ಸೇತುವೆ, ಕಿಂಡಿಬೆಟ್ಟು, ಶಾಲಾ ಕೊಠಡಿ, ಕುಡಿಯುವ ನೀರು, ಮುಂತಾದ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗಿದೆ ಎಂದು ಅವರು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿ ಸವಲತ್ತುಗಳನ್ನು ಸಾರ್ವಜನಿಕ ರಿಗೆ ಸಿಗುವಂತೆ ಮಾಡಿದ್ದೇನೆ. ಆಸ್ಪತ್ರೆಯಲ್ಲಿ ನುರಿತ ತಜ್ಞರ ನೇಮಕಮಾಡಲಾಗಿದ್ದು, ಬಂಟ್ವಾಳ ಹಾಗೂ ವಾಮದಪದವಿನಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ, ಬಂಟ್ವಾಳ ದಲ್ಲಿ ಹೆಚ್ಚಿನ ಡಯಾಲಿಸಿಸ್ ಯಂತ್ರ ಅಳವಡಿಸಿದ್ದು ದಿನವೊಂದಕ್ಕೆ 70 ಮಂದಿಗೆ ಉಚಿತ ಡಯಾಲಿಸಿಸ್ ಮಾಡಲಾಗುತ್ತಿದೆ.
ರಾಜ್ಯದಲ್ಲೇ ಪ್ರಥಮವಾಗಿ ಆರೋಗ್ಯ ಇಲಾಖೆ ಮತ್ತು ಸಾರಿಗೆ ಇಲಾಖೆಯ ಸಹಭಾಗಿತ್ವದಲ್ಲಿ ಐಸಿಯು ಬಸ್ ಮೂಲಕ ಗ್ರಾಮಗ್ರಾಮಕ್ಕೆ ತೆರಳಿ ಜನರ ಆರೋಗ್ಯ ತಪಾಸಣೆ ಮಾಡಲಾಗುತ್ತಿದ್ದು, ಈವರೆಗೆ 18 ಸಾವಿರ ಜನರು ತಪಾಸಣಾ ನಡೆಸಿ ಗ್ರಾಮಗ್ರಾಮದ ಜನತೆ ಪ್ರಯೋಜನ ಪಡೆದಿದ್ದಾರೆ.
ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಪ್ರತಿ ಹಳ್ಳಿಗಳ ಮನೆಗೆ ನೀರು ನೀಡುವ ವ್ಯವಸ್ಥೆ ಮಾಡಿದ್ದೇವೆ. 33.72 ಕೋಟಿ ವೆಚ್ಚದಲ್ಲಿ 30 ಗ್ರಾ.ಪಂ.ಗಳ ಒಟ್ಟು 46 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆ ಭಾಗಶಃ ಮುಕ್ತಾಯವಾಗಿದೆ. 2021-22 ನೇ ಸಾಲಿನಲ್ಲಿ 18.52 ಕೋಟಿ ವೆಚ್ಚದಲ್ಲಿ 9. ಗ್ರಾಮ ಪಂಚಾಯತ್ ಗಳ ಒಟ್ಟು 10 ಗ್ರಾಮಗಳಿಗೆ ಶುದ್ದಕುಡಿಯುವ ನೀರನ್ನು ಮನೆ ಹಾಗೂ ಪ್ರತಿ ಶಾಲೆ ಅಂಗನವಾಡಿ ಕೇಂದ್ರ ಗಳಿಗೆ ಒದಗಿಸಲಾಗಿದ್ದು, ಎರಡನೇ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಡಿ ಶಿಥಿಲಗೊಂಡ ಕೊಠಡಿಗಳ ಮರುನಿರ್ಮಾಣ ಕ್ಕೆ ವಿವೇಕ ಯೋಜನೆ ಯಡಿ ತಲಾ 13.90 ಲಕ್ಷ ವೆಚ್ಚದಲ್ಲಿ ಪ್ರಾಥಮಿಕ ಶಾಲೆಗಳ ಕೊಠಡಿಗಳ ಹಾಗೂ ಪ್ರೌಡಶಾಲೆಗಳಿಗೆ ತಲಾ 16.40 ಲಕ್ಷ ವೆಚ್ಚದ 7 ಕೊಠಡಿ ಹೀಗೆ ಒಟ್ಟು 504 ಲಕ್ಷ ರೂ.ಮಂಜೂರಾಗಿದೆ, ಜೊತೆಗೆ ಅಗತ್ಯವಿರುವ 82 ಶಾಲಾ ಕೊಠಡಿ ಹಾಗೂ ದುರಸ್ತಿಗಾಗಿ 158.15 ಮಂಜೂರಾಗಿದ್ದು, ಕಾಮಗಾರಿ ಪ್ರಗತಿ ಹಂತದಲ್ಲಿದೆ. ಲೋಕೋಪಯೋಗಿ ಯೋಜನೆ ಯಡಿ ಗ್ರಾಮೀಣ ಶಾಲಾ ಸಂಪರ್ಕಿಸುವ ಗ್ರಾಮ ಬಂಧು ಯೋಜನೆ ಯಡಿ 400 ಲಕ್ಷ ವೆಚ್ಚದಲ್ಲಿ 60 ಕಾಲು ಸಂಕಗಳ ಕಾಮಗಾರಿ ಪ್ರಗತಿಯಲ್ಲಿದೆ.
ಪುರಸಭಾ ವ್ಯಾಪ್ತಿಯ ಜಕ್ರಿಬೆಟ್ಟುವಿನಲ್ಲಿ ಸುಮಾರು 135 ಕೋಟಿ ವೆಚ್ಚದಲ್ಲಿ ನೇತ್ರಾವತಿ ನದಿಗೆ ಅಣೆಕಟ್ಟು ಸಹಿತ ಸಂಪರ್ಕ ರಸ್ತೆ ನಿರ್ಮಾಣ ಕಾರ್ಯಪ್ರಗತಿಯಲ್ಲಿದೆ. ಅಂತರ್ಜಲ ಮಟ್ಟವನ್ನು ವೃದ್ಧಿಸುವ ನಿಟ್ಟಿನಲ್ಲಿ 18 ಸೇತುವೆ ಸಹಿತ ಕಿಂಡಿ ಅಣೆಕಟ್ಟು ಚೆಕ್ ಡ್ಯಾಂ ಗಳ ನಿರ್ಮಾಣ ನಡೆಯುತ್ತಿದೆ.