ಮೂಲ್ಕಿ,ಫೆ 28(MSP): ರಾಜ್ಯ ಸರ್ಕಾರ ಮೂಲ್ಕಿ ತಾಲೂಕಾಗಿ ಘೋಷಣೆ ಮಾಡಿರುವುದರಿಂದ ಸ್ಥಳೀಯರ, ಜನನಾಯಕರ ನಾಲ್ಕು ದಶಕಗಳ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದಂತಾಗಿದ್ದು, ಜನತೆಯಲ್ಲಿ ಸಂತಸ ಮೂಡಿದೆ. ಬಹು ನಿರೀಕ್ಷೆಯ ಮೂಲ್ಕಿ ತಾಲೂಕು ಪ್ರಸ್ತಾಪನೆಯು ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ಅವರ ಅಧ್ಯಕ್ಷತೆಯ ಸಂಪುಟ ಸಭೆಯಲ್ಲಿ ಸೋಮವಾರ ಮಾನ್ಯತೆಗೊಂಡು, ತಾಲೂಕು ಆಗಿ ಘೋಷಣೆಯಾಗಿ ಜನರ ಬೇಡಿಕೆಯನ್ನು ಸರಕಾರ ಪುರಸ್ಕರಿಸಿರುವುದರಿಂದ ಮೂಲ್ಕಿ ಸರ್ವಪಕ್ಷಗಳ ನಾಯಕರು, ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.
ಉಡುಪಿ ಜಿಲ್ಲೆ ಆಗುವ ಮೊದಲೇ ಈಗಿನ ಉಡುಪಿ ಜಿಲ್ಲೆಯ ಆಗುವ ಮೊದಲೇ ಈಗಿನ ಉಡುಪಿ ಜಿಲ್ಲೆಯ ಕೆಲವು ವ್ಯಾಪ್ತಿಯ ಹಲವಾರು ಪ್ರದೇಶವನ್ನು ಸೇರಿಕೊಂಡು ಮೂಲ್ಕಿ ತಾಲೂಕು ರಚನೆ ನ್ಯಾಯಸಮ್ಮವಾಗಿದೆ ಎನ್ನುವ ಬಗ್ಗೆ ಹುಂಡೇಕಾರ್, ಗದ್ದಿ ಗೌಡರ್ ಮತ್ತು ವಾಸುದೇವ್ ರಾವ್ ಮೊದಲಾದವರ ಅಧ್ಯಕತೆಯನ್ನೊಳಗೊಂಡ ಸಮಿತಿ ಇಲ್ಲಿಗೆ ಆಗಮಿಸಿ ಅಧ್ಯಯ ನಡೆಸಿ ಸರಕಾರಕ್ಕೆ ಶಿಫಾರಸು ನೀಡಿತ್ತು.
ಮೂಲ್ಕಿ ತಾಲೂಕಿಗೆ ಬೇಕಾದ ಹಲವು ಅರ್ಹತೆಗಳು ಇಲ್ಲಿವೆ ಯಾಕೆಂದರೆ ಈಗಾಗಲೇ ಇಲ್ಲಿ ಮೂಲ್ಕಿ ಹೋಬಳಿಯಲ್ಲಿ 10 ಗ್ರಾಮ ಪಂಚಾಯಿತಿ, ಒಂದು ಪಟ್ಟಣ ಪಂಚಾಯಿತಿ, 32 ಗ್ರಾಮಗಳು, ಸಬ್ರಿಜಿಸ್ಟ್ರಾರ್ ಕಚೇರಿ, ಸರ್ಕಾರಿ ಮತ್ತು ಖಾಸಗಿ ಪ್ರಥಮ ದರ್ಜೆ ಪದವಿ ಪೂರ್ವ ಕಾಲೇಜು, ಎಲ್ಲಾ ಪ್ರಮುಖ ರಾಷ್ಟ್ರೀಯ ಮಟ್ಟದ ಬ್ಯಾಂಕ್ಗಳ ಶಾಖೆಗಳು, ನಾಡ ಕಚೇರಿ, ವಿಶೇಷ ತಹಸೀಲ್ದಾರ್, ಕೈಗಾರಿಕಾ ಪ್ರಾಂಗಣ, ಜನ ವಸತಿ ಪ್ರದೇಶಗಳು, ರೈಲ್ವೆ ನಿಲ್ದಾಣ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿರುವ ಸರ್ಫಿಂಗ್ನ ಸಸಿಹಿತ್ಲು ಮುಂಡಾ ಪ್ರದೇಶ, ಬೋಟ್ಗಳಿಗೆ ಲಂಗರು ಹಾಕಲು ಜೆಟ್ಟಿ, ಮಂಗಳೂರು ಪೊಲೀಸ್ ಕಮಿಷನರೇಟ್ನ ಗಡಿಭಾಗ, ಮೂಲ್ಕಿ ಸೀಮೆಯ ಅರಮನೆ, ಸೀಮೆಯ ಕಂಬಳ, ಬಪ್ಪನಾಡು ಕ್ಷೇತ್ರ, ಚರ್ಚ್, ಮಸೀದಿಗಳ ಸಹಿತ ಜೈನ ಬಸದಿ, ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಸಂಘಟನೆಯ ಮೂಲ ಕೇಂದ್ರಗಳು ಇಲ್ಲಿವೆ.
ಇನ್ನು ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಶಾಸಕ ಉಮಾನಾಥ ಕೋಟ್ಯಾನ್ ಮೂಲ್ಕಿ ತಾಲೂಕು ಆಗಿ ಘೋಷಣೆ ಮಾಡಿರುವುದು ಸಂತಸ ತಂದ ವಿಚಾರ. ಮೂಡುಬಿದಿರೆ ಹಾಗೂ ಮೂಲ್ಕಿಗೆ ಪೂರ್ಣ ಪ್ರಮಾಣದ ಸವಲತ್ತು ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇನೆ. ಎರಡು ಜನತೆಯ ನಿರೀಕ್ಷೆ ಹಾಗೂ ಹೋರಾಟಗಾರರ ಪ್ರಯತ್ನಕ್ಕೆ ಸರ್ಕಾರ ಸ್ಪಂದಿಸುತ್ತಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.