ಮಂಗಳೂರು, ಡಿ 05 (DaijiworldNews/HR): ಮಾಂಡ್ ಸೊಭಾಣ್ ಆಯೋಜಿಸಿದ್ದ ನಾಟಕ ಬರವಣಿಗೆ ಸ್ಪರ್ಧೆಯಲ್ಲಿ ಫಾದರ್ ಆಲ್ವಿನ್ ಸೆರಾವೊ ಮತ್ತು ಸ್ಟ್ಯಾನಿ ಬೇಳಾ ಅವರು ಬಹುಮಾನ ಪಡೆದುಕೊಂಡಿದ್ದಾರೆ.
ಕೊಂಕಣಿ ರಂಗಭೂಮಿಯನ್ನು ಉತ್ತೇಜಿಸುವ ಸಲುವಾಗಿ, ಕೊಂಕಣಿ ಭಾಷೆ ಮತ್ತು ಅದರ ವಿಶಿಷ್ಟ ಸಂಸ್ಕೃತಿಯನ್ನು ವಿಶ್ವಾದ್ಯಂತ ಪ್ರಚಾರ ಮಾಡಲು ಶ್ರಮಿಸುತ್ತಿರುವ ಕೊಂಕಣಿಯ ಮಾಂಡ್ ಸೊಭಾಣ್ ಸಂಸ್ಥೆಯು ನಾಟಕ ಬರೆಯುವ ಸ್ಪರ್ಧೆಯನ್ನು ಆಯೋಜಿಸಿದ್ದು, ಡಿಸೆಂಬರ್ 4 ರಂದು ಮಾಂಡ್ ಸೊಭಾಣ್ ಅವರು ಪ್ರಸ್ತುತಪಡಿಸಿದ ಮಾಸಿಕ ರಂಗಪ್ರದರ್ಶನ ಕಾರ್ಯಕ್ರಮದಲ್ಲಿ ವಿಜೇತರ ಹೆಸರನ್ನು ಘೋಷಿಸಲಾಗಿದೆ.
ಫಾದರ್ ಆಲ್ವಿನ್ ಸೆರಾವೊ ರಚಿಸಿದ ಎಮ್ಮಾವ್ಸ್ ನಾಟಕಕ್ಕೆ ಪ್ರಥಮ ಬಹುಮಾನ 10,000 ನಗದು ಮತ್ತು ಸ್ಮರಣಿಕೆಯನ್ನು ಪಡೆದುಕೊಂಡಿದ್ದು, ಸ್ಟ್ಯಾನಿ ಬೇಳಾ ಬರೆದ 'ಕಾರ್ಮೆಲ್ ಸೆಕೆಂಡ್ ಸ್ಟ್ರೀಟ್' ನಾಟಕವು ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದು, ಅವರಿಗೆ 5 ಸಾವಿರ ರೂ. ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸ್ಪರ್ಧೆಯಲ್ಲಿ ಆರು ನಾಟಕಗಳಿದ್ದು, ಡೆನಿಸ್ ಮೊಂತೇರೊ, ಜೋಯಲ್ ಪಿರೇರಾ ಮತ್ತು ಫಾದರ್ ಜೋಸಿ ಸಿದ್ದಕಟ್ಟೆ ಅವರನ್ನು ಸನ್ಮಾನಿಸಲಾಯಿತು. ಎಲ್ಲಾ ಲೇಖಕರಿಗೆ ಸಮಾಧಾನಕರ ಬಹುಮಾನವಾಗಿ 2,000 ರೂ. ನೀಡಲಾಯಿತು.
ಫಾ. ಆಲ್ವಿನ್ ಸೆರಾವೊ ಅವರು ಕೊಂಕಣಿ ರಂಗಭೂಮಿಯಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಸ್ಟ್ಯಾನಿ ಬೇಳಾ ಅವರು ಕನ್ನಡ, ತುಳು ಮತ್ತು ಕೊಂಕಣಿ ಧಾರವಾಹಿ, ಕಾರ್ಯಕ್ರಮಗಳ ನಿರ್ದೇಶಕರಾಗಿ ಪ್ರಸಿದ್ಧರಾಗಿದ್ದಾರೆ.