ಮಂಗಳೂರು, ಡಿ 05( DaijiworldNews/MS): ರೌಡಿ ಶೀಟರ್ಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ವಿಚಾರವನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಸಮರ್ಥಿಸಿಕೊಂಡಿದ್ದು, ಈ ಮೂಲಕ ರವಿ ಅವರು ತಮ್ಮ ಪಕ್ಷದ ನೈಜ ಸಿದ್ಧಾಂತ ಬಹಿರಂಗಪಡಿಸಿದ್ದಾರೆ. ಅವರ ಹೇಳಿಕೆ ಬಿಜೆಪಿಯ ಮುಖವನ್ನು ಅನಾವರಣಗೊಳಿಸಿದ್ದಾರೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ರಮಾನಾಥ್ ರೈ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈ, ''ರಾಜಕಾರಣಿಗಳ ಮೇಲೆ ಪ್ರಕರಣ ದಾಖಲಾಗುವುದು ಸಾಮಾನ್ಯ ಎಂದು ಸಿ ಟಿ ರವಿ ಹೇಳಿದ್ದಾರೆ. ಆದರೆ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿ ರೌಡಿ ಶೀಟರ್ ಎಂದು ಪರಿಗಣಿಸುವುದರಲ್ಲಿ ವ್ಯತ್ಯಾಸವಿದೆ. ಒಬ್ಬ ವ್ಯಕ್ತಿ ತನ್ನ ಅಪರಾಧ ಕೃತ್ಯಗಳ ಮೂಲಕ ಪದೇ ಪದೇ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದಾಗ ಮಾತ್ರ ಪೊಲೀಸ್ ಇಲಾಖೆ ಅವರನ್ನು ರೌಡಿ ಶೀಟರ್ ಎಂದು ಪರಿಗಣಿಸುತ್ತದೆ. ಇಂಥವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದನ್ನು ರವಿ ಸಮರ್ಥಿಸಿಕೊಳ್ಳುವುದು ಎಷ್ಟು ಸರಿ? ಬಿಜೆಪಿ ಆಡಳಿತದಲ್ಲಿ ಕೋಮುಗಲಭೆ ತಾರಕ್ಕೆ ಏರಿದೆ. ಬುದ್ದಿವಂತರ ಜಿಲ್ಲೆ ಎಂದೇ ಕರೆಸಿಕೊಳ್ಳುವ ದಕ್ಷಿಣ ಕನ್ನಡ ಜಿಲ್ಲೆ ಕೋಮು ರಾಜಕಾರಣದಲ್ಲಿ ಕುದಿಯುತ್ತಿದೆ. ಒಂದು ಸಮುದಾಯದ ಜನರು ಇತರ ಸಮುದಾಯದ ಜನರನ್ನು ಕೊಲ್ಲುವುದು ಸಾಮಾನ್ಯವಾಗಿದೆ. ಸಿ ಟಿ ರವಿ ಅವರ ಹೇಳಿಕೆ ಇದಕ್ಕೂ ಅನ್ವಯಿಸುತ್ತದೆ "ಎಂದು ಹೇಳಿದ್ದಾರೆ.
"ನಮ್ಮ ಜಿಲ್ಲೆಯಲ್ಲಿ ಕೊಲೆಗಳ ವಿರುದ್ಧ ದಾಖಲಾಗಿರುವ ಎಫ್ಐಆರ್ನಲ್ಲಿ ಕಾಂಗ್ರೆಸ್ ಮುಖಂಡರ ಅಥವಾ ಕಾರ್ಯಕರ್ತರ ಹೆಸರು ಇಲ್ಲ. ಈ ಮಾಹಿತಿಯನ್ನು ಯಾರು ಬೇಕಾದರೂ RTI ಮೂಲಕ ಪಡೆಯಬಹುದು"ಎಂದು ಹೇಳಿದರು.
''ಜಿಲ್ಲೆಯಲ್ಲಿ ಕೋಮು ಕೊಲೆಗಳಿಗೆ ಕಾರಣರಾದವರು ಸ್ವಚ್ಛಂದವಾಗಿ ಓಡಾಡುತ್ತಿದ್ದಾರೆ. ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ ಕೋಮು ಹತ್ಯೆಗೆ ಸಂಚು ರೂಪಿಸಿದವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಈ ಉದ್ದೇಶಕ್ಕಾಗಿ ಎಸ್ಐಟಿ ರಚಿಸುವ ಅವಶ್ಯಕತೆಯಿದೆ. ನಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬಂದಾಗ ಅದೇ ರೀತಿ ರಚನೆ ಮಾಡುತ್ತೇವೆ" ಎಂದು ಹೇಳಿದರು.
"ಎನ್ಐಟಿಕೆ ಟೋಲ್ ಗೇಟ್ ಮುಚ್ಚಿದ ನಂತರ ಬ್ರಹ್ಮರಕೂಟ್ಲು ಟೋಲ್ ಗೇಟ್ನಲ್ಲಿ ಟೋಲ್ ಶುಲ್ಕವನ್ನು ಹೆಚ್ಚಿಸಲಾಗುತ್ತದೆ ಎಂಬ ವದಂತಿಗಳು ಹರಡಿವೆ. ನಾವು ಇದನ್ನು ಸಂಪೂರ್ಣವಾಗಿ ವಿರೋಧಿಸುತ್ತೇವೆ. ಟೋಲ್ ಗೇಟ್ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ ಸುನೀಲ್ ಕುಮಾರ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಹಿತ ಕಾಪಾಡುವಲ್ಲಿ ಕಿಂಚಿತ್ತೂ ಕಾಳಜಿ ಇಲ್ಲ ಎಂಬುದು ದೃಢಪಟ್ಟಿದೆ" ಎಂದು ಆರೋಪಿಸಿದರು.