ಮಂಗಳೂರು, ಫೆ 28(MSP): ನಕಲಿ ನಂಬರ್ ಪ್ಲೇಟ್ ಅಳವಡಿಸಿ ದರೋಡೆ ನಡೆಸಲು ಸಂಚು ರೂಪಿಸಿದ್ದ 5 ಜನ ಅಂತಾರಾಜ್ಯ ಆರೋಪಿಗಳನ್ನು ಉಳ್ಳಾಲ ಪೊಲೀಸರು ಮತ್ತು ದಕ್ಷಿಣ ಉಪ-ವಿಭಾಗದ ರೌಡಿ ನಿಗ್ರಹ ದಳದ ಸಿಬಂದಿ ಬಂಧಿಸಿ ಅವರಿಂದ 4 ಲ.ರೂ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕೇರಳದ ತ್ರಿಶ್ಯೂರ್ ನಿವಾಸಿಗಳಾದ ಮುಹಮ್ಮದ್ ಫಾಝಿಲ್ (24), ಸಲೀಂ (30), ಸುಜಿತ್ ಜಿ. (24), ಮುಹಮ್ಮದ್ ಶರೀಫ್ (25), ಅನಸ್ (21), ಬಂಧಿತ ಆರೋಪಿಗಳು. ಇವರಲ್ಲಿ ಮುಹಮ್ಮದ್ ಫಾಝಿಲ್ ಮೇಲೆ ತೃಶ್ಶೂರ್ ನಲ್ಲಿ ೪ ಕಳ್ಳತನ ಪ್ರಕರಣ ದಾಖಲಾಗಿವೆ.
ಆರೋಪಿಗಳು ಉಳ್ಳಾಲ ಠಾಣೆ ವ್ಯಾಪ್ತಿಯ ತಲಪಾಡಿ ಬಳಿ ಚೂರಿ, ರಾಡ್, ದೊಣ್ಣೆ, ಗಮ್ ಟ್ಯಾಪರ್ ರೋಲ್ಗಳನ್ನು ಇಟ್ಟುಕೊಂಡು ಕಾರಿಗೆ ಅದರ ಕೆ.ಎಲ್.08-ಬಿಆರ್-8439 ಸಂಖ್ಯೆಯ ಬದಲಿಗೆ ಕೆಎಲ್-54-ಜೆ-8892 ಎಂಬ ನಕಲಿ ನಂಬರ್ ಪ್ಲೇಟ್ ಅಳವಡಿಸಿ ದರೋಡೆ ನಡೆಸಲು ಆರೋಪಿಗಳು ಸಂಚು ರೂಪಿಸಿದ್ದರು. ಆರೋಪಿಗಳು ಶೋಕಿ ಜೀವನ ನಡೆಸಲು ಕೃತ್ಯ ನಡೆಸುತ್ತಿದ್ದಾರೆ. ಕೃತ್ಯ ನಡೆಸಲು ಬಳಸಿದ ಕಾರಿಗೆ ಅದರ ಮೂಲ ನೋಂದಣಿ ನಂಬರ್ ಬದಲಾಗಿ ನಕಲಿ ನಂಬರ್ನ್ನು ಅಳವಡಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ತೆ ಕಾರ್ಯಾಚರಣೆಯಲ್ಲಿ ಮಂಗಳೂರು ದಕ್ಷಿಣ ವಿಭಾಗದ ಎಸಿಪಿ, ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹದಳದ ತಂಡ ಹಾಗೂ ಉಳ್ಳಾಲ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.