ಕಾರ್ಕಳ, ಡಿ 05 (DaijiworldNews/HR): ತಾಲೂಕು ಪಂಚಾಯತ್ನ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದ ಬಳಿಕ ಅದೇ ವೇದಿಕೆಯಲ್ಲಿ ಅಯೋಜಿಸಿದ ಮನೋರಂಜನಾ ಕಾರ್ಯಕ್ರಮದಲ್ಲಿ ಹಿಂದಿ ಚಲನಚಿತ್ರ ಗೀತೆಯ ಹಾಡಿಗೆ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಯರು ಲಿಂಗಬೇಧ ಮರೆತು ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದ ಘಟನಾವಳಿಯ ದೃಶ್ಯಾವಳಿಯು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ರೂ. 2.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ತಾಲೂಕು ಪಂಚಾಯತ್ ನ ನೂತನ ಕಟ್ಟಡದ ಉದ್ಘಾಟನೆಯನ್ನು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ವಿ.ಸುನೀಲ್ ಕುಮಾರು ಶನಿವಾರ ಸಂಜೆ ಉದ್ಘಾಟಿಸಿದ್ದರು.
ಇನ್ನು ಸರಕಾರಿ ಶಿಷ್ಟಾಚಾರದಂತೆ ಕಾರ್ಯಕ್ರಮ ಆಯೋಜನೆ ಕಾರ್ಯಕ್ರಮ ನಡೆದಿತ್ತು. ಆ ನಂತರದಲ್ಲಿ ಕನ್ನಡ ಸಂಸ್ಕೃತಿ ಪ್ರತಿಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರೆ ಅದಕ್ಕೆ ಸಾರ್ವಜನಿಕರೂ ಮನ್ನಣೆ ನೀಡುತ್ತಿದ್ದರು. ಆದರೆ ಇಲ್ಲಿ ನಡೆದಿರುವುದು ಬರೀ ಮನೋರಂಜನೆ ಕಾರ್ಯಕ್ರಮವೇ ಆಗಿತ್ತು. ಸರಕಾರಿ ಕಾರ್ಯಕ್ರಮಗಳಲ್ಲಿ ಹಾಗೂ ಸರಕಾರಿ ಕಚೇರಿಗಳಲ್ಲಿ ಕನ್ನಡ ಕಡ್ಡಾಯ ಬಳಕೆ ಮಾಡಬೇಕೆಂಬ ನಿಯಾಮಗಳು ಕಡತದಲ್ಲಿ ಮಾತ್ರ ಉಳಿದುಕೊಂಡಿದ್ದು ಕಾರ್ಯರೂಪಕ್ಕೆ ತರುವಲ್ಲಿ ಇನ್ನೂ ಸಾಧ್ಯವಾಗಿಲ್ಲ ಎಂಬುವುದನ್ನು ಕಾರ್ಯಕ್ರಮವೇ ಪೂರಕವಾಗಿದೆ.
ಸಚಿವ ವಿ.ಸುನೀಲ್ಕುಮಾರ್ ಅವರು ದತ್ತಮಾಲಾಧಾರಿಯಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ , ಮಿತವಾಗಿ ಮಾತನಾಡಿ ದತ್ತಮಾಲಾಧಾರಣೆ ಆಚರಣ ಕ್ರಮದ ಶಿಷ್ಟಾಚಾರವನ್ನು ಪರಿಪಾಲನೆ ಮಾಡಿದ್ದರು. ಇದರ ಬೆನ್ನಲ್ಲೇ ಅದೇ ವೇದಿಯಲ್ಲಿ ಮನೋರಂಜನೆ ಕಾರ್ಯಕ್ರಮ ನಡೆದಿರುವುದು ಹಾಗೂ ಅದರ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಆಡಳಿತ ಪಕ್ಷದ ಕಾರ್ಯಕರ್ತರೇ ವೈರಲ್ ಮಾಡಿರುವುದು ಬೆಳಕಿಗೆ ಬಂದಿದೆ.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾ ಧಿಕಾರಿ ಗುರುದತ್ತ ಇತರ ಅಧಿಕಾರಿ ಹಾಗೂ ಸಿಬ್ಬಂದಿಯರು (ಕುಣಿತದಲ್ಲಿ ಪಾಲ್ಗೊಂಡವರು) ಮೇಲಾಧಿಕಾರಿಗಳ ಹಾಗೂ ಸಚಿವ ವಿ.ಸುನೀಲ್ ಕುಮಾರ್ ಅವರ ಕೆಂಗಣ್ಣಿಗೆ ಗುರಿಯಾಗಿರುವುದಂತು ಲೋಕಸತ್ಯ.