ಬೆಳ್ತಂಗಡಿ, ಡಿ 05DaijiworldNews/MS): ಕಕ್ಕಿಂಜೆಯ ಖಾಸಗಿ ಆಸ್ಪತ್ರೆಗೆ ಸೇರಿದ ಆಂಬುಲೆನ್ಸ್ ಬೆಳ್ತಂಗಡಿ ಸೇತುವೆ ಬಳಿ ನಿಯಂತ್ರಣ ತಪ್ಪಿ ಸೇತುವೆ ಬದಿಗೆ ಢಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಅಪಘಾತದಿಂದಾಗಿ ಆಂಬುಲೆನ್ಸ್ ನಲ್ಲಿದ್ದ ಓರ್ವ ವೈದ್ಯ ಸೇರಿ ಒಟ್ಟು ಮೂವರಿಗೆ ಗಾಯಗಳಾಗಿವೆ. ಡಾ.ನಿತಿನ್ ಅವರಿಗೆ ತಲೆಗೆ ಗಾಯ ಹಾಗೂ ಕೈ ಮೂಳೆ ಮುರಿತಕ್ಕೊಳಗಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಾಳುಗಳಾದ ಇನ್ನಿಬ್ಬರು ಆಸ್ಪತ್ರೆಯ ಕ್ಷ ಕಿರಣ ತಜ್ಞ ರಿತೇಶ್ (24) ಮತ್ತು ಲ್ಯಾಬ್ ಟೆಕ್ನಿಷಿಯನ್ ಹುಝೈರ್ (23) ಎಂದು ಗುರುತಿಸಲಾಗಿದ್ದು, ಅವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಂಬುಲೆನ್ಸ್ ನಲ್ಲಿ ರೋಗಿಗಳು ಇರಲಿಲ್ಲ ಎಂದು ತಿಳಿದು ಬಂದಿದೆ.
ಇವರು ಮೆಡಿಸಿನ್ ಪಾರ್ಸೆಲ್ ವಿಚಾರವಾಗಿ ವಾಹನದಲ್ಲಿ ಬೆಳ್ತಂಗಡಿಗೆ ಬಂದಿದ್ದರು. ಅಪಘಾತದಿಂದ ಬೊಲೆರೋ ಆಂಬುಲೆನ್ಸ್ ವಾಹನ ಬಹುತೇಕ ನುಜ್ಜುಗುಜ್ಜಾಗಿದೆ. ಘಟನೆಯಿಂದ ಸುಮಾರು ಅರ್ಧ ತಾಸು ಟ್ರಾಫಿಕ್ ಜಾಮ್ ಉಂಟಾಯಿತು. ತಕ್ಷಣ ಸ್ಪಂದಿಸಿದ ಬೆಳ್ತಂಗಡಿ ಟ್ರಾಫಿಕ್ ಪೊಲೀಸರು ನಾಗರಿಕರ ಸಹಕಾರದಿಂದ ವಾಹನ ಸಂಚಾರ ಸುಗಮ ಗೊಳಿಸಿದರು.