ಪಡುಬಿದ್ರಿ, ಡಿ 04 (DaijiworldNews/SM): ನೀರು ಶೇಖರಣೆ ಮಾಡುವ ಅಣೆಕಟ್ಟು ಒಂದರ ಹಲಗೆಯನ್ನು ಅನಗತ್ಯವಾಗಿ ತೆಗೆದು ಗ್ರಾಮಸ್ಥರಿಗೆ ತೊಂದರೆ ಮಾಡಿದ ಸಣ್ಣ ನೀರಾವರಿ ಇಲಾಖೆಯ ವಿರುದ್ದ ಮಟ್ಟು ಹೊಯಿಗೆ, ಪಲಿಮಾರು ಗ್ರಾಮಸ್ಥರು ಪಲಿಮಾರು ಗ್ರಾಮ ಪಂಚಾಯತಿ ಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ವರದಿಯಾಗಿದೆ.
ಪ್ರತಿಭಟನಾಕಾರರ ಪರವಾಗಿ ಮಾತನಾಡಿದ ಮಧುಕರ್ ಪಲಿಮಾರು ಗ್ರಾಮದ ಕ್ರಷಿಕರ ಅನುಕೂಲ ಕ್ಕಾಗಿ ಸುಮಾರು ಏಳು ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಅಣೆಕಟ್ಟು ಗ್ರಾಮಸ್ಥರ ಉಪಯೋಗಕ್ಕೆ ಬರುತ್ತಿಲ್ಲ. ನೀರು ಶೇಖರಣೆ ಮಾಡಲು ಅಳವಡಿಸಿದ ಹಲಗೆಯನ್ನು ಏಕಾಏಕಿ ತೆರವುಗೊಳಿಸುವ ಮೂಲಕ ಅಧಿಕಾರಿಗಳು ಗ್ರಾಮಸ್ಥರಿಗೆ ತೊಂದರೆ ನೀಡಿದ್ದಾರೆ. ತಕ್ಷಣ ತೆಗೆದ ಹಲಗೆಯನ್ನು ಜೋಡಿಸಬೇಕು ಎಂದು ಆಗ್ರಹಿಸಿದರು.
ಪಲಿಮಾರು ಪಂಚಾಯತ್ ಅಧ್ಯಕ್ಷೆ ಗಾಯತ್ರಿ ಪ್ರಭು ಮಾತನಾಡಿ ಪಂಚಾಯತ್ ಅಧ್ಯಕ್ಷರ ಗಮನಕ್ಕೆ ಬಾರದೆ ಅಣೆಕಟ್ಟಿನ ಹಲಗೆಯನ್ನು ತೆರವುಗೊಳಿಸಿದ್ದಾರೆ. ಈ ಬಗ್ಗೆ ಕೇಳಿದ ಪ್ರಶ್ನೆಗೆ ಸೂಕ್ತವಾಗಿ ಉತ್ತರ ಕೊಟ್ಟಿಲ್ಲ. ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದರು.