ಮಂಗಳೂರು,ಫೆ 28(MSP): ನಗರದ ಬಂಗ್ರಕೂಳೂರಿ ನಲ್ಲಿರುವ ಆಂಟನಿ ವೇಸ್ಟ್ ಹ್ಯಾಂಡ್ಲಿಂಗ್ ಕಂಪನಿಯ ಯಾರ್ಡ್ನಿಂದ ವಾಹನಗಳ ಡಿಸ್ಕ್ ಸಮೇತವಾಗಿ 7 ಟಯರ್ಗಳನ್ನು ಕಳವು ಮಾಡಿದ್ದ ಇಬ್ಬರಿಗೆ ಒಂದು ವರ್ಷ ಎರಡು ತಿಂಗಳ ಜೈಲು ಶಿಕ್ಷೆ ವಿಧಿಸಿ ನಗರದ ಮೂರನೇ ಜೆಎಂಎಫ್ ನ್ಯಾಯಾಲಯ ಆದೇಶ ಹೊರಡಿಸಿದೆ.
ತಣ್ಣೀರುಬಾವಿ ನಿವಾಸಿ ರಾಜೇಶ್ ಯಾನೆ ಅಪ್ಪು (24) ಮತ್ತು ಪಂಜಿಮೊಗರು ನಿವಾಸಿ ಸುರೇಶ್ (23) ಶಿಕ್ಷೆಗೊಳಗಾದವರು. ಈ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ತಣ್ಣೀರುಬಾವಿ ನಿವಾಸಿ ನವೀನ್ಕುಮಾರ್ ಎಂಬಾತ ಇನ್ನೂ ತಲೆಮರೆಸಿಕೊಂಡಿದ್ದಾನೆ.
ಪ್ರಕರಣದ ವಿವರ:
ಮಂಗಳೂರು ನಗರದ ತ್ಯಾಜ್ಯ ವಿಲೇವಾರಿ ಗುತ್ತಿಗೆ ವಹಿಸಿಕೊಂಡಿರುವ ಆಂಟನಿ ವೇಸ್ಟ್ ಹ್ಯಾಂಡ್ಲಿಂಗ್ ಸೆಲೆ ಕಂಪನಿಯ ವಾಹನಗಳ ಉಪಯೋಗಕ್ಕಾಗಿ ಬಂಗ್ರ ಕೂಳೂರಿನಲ್ಲಿ ಇರಿಸಿದ್ದ ಡಿಸ್ಕಿ ಸಮೇತ ಇರುವ 7 ಟೈರ್ ನ್ನು ಮೂವರೂ 2015ರ ಏಪ್ರಿಲ್ 26ರಿಂದ ಮೇ 14ರ ನಡುವಿನ ಅವಧಿಯಲ್ಲಿ ಕಳವು ಮಾಡಿದ್ದರು. ತಣ್ಣೀರುಬಾವಿಯ ಕೋರ್ದಬ್ಬು ದೈವಸ್ಥಾನದ ಬಳಿ ಅವುಗಳನ್ನು ಅಡಗಿಸಿಟ್ಟಿದ್ದರು.
ಕಾವೂರು ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಉಮೇಶ್ ಕೆ.ಎನ್. ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಮೋಹನ್ ಕುಮಾರ್ ಪ್ರಾಸಿಕ್ಯೂಷನ್ ಪರ ವಾದಿಸಿದ್ದರು. ಬುಧವಾರ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯ, ರಾಜೇಶ್ ಮತ್ತು ಸುರೇಶ್ ಅಪರಾಧಿಗಳು ಎಂದು ಸಾರಿತು. ಇಬ್ಬರಿಗೂ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿತು.