ಕಾರ್ಕಳ, ಡಿ 04 (DaijiworldNews/DB): ನಗರದ ಸದಾನಂದ ಕಾಮತ್ ರಸ್ತೆಯ ಮಹಾಲಕ್ಷ್ಮೀ ನಗರ ಎಂಬಲ್ಲಿನ ಯಶಸ್ವಿ ಮನೆಯ ಬಾಗಿಲು ಮುರಿದು ನಗ-ನಗದು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಅಪರಾಧಿ ಎಂದು ಸಾಬೀತಾದ ಹಿನ್ನಲೆಯಲ್ಲಿ ಕಾರ್ಕಳ ಹಿರಿಯ ಸಿವಿಲ್ ನ್ಯಾಯಧೀಶರು ಮತ್ತು ಹೆಚ್ಚುವರಿ ನ್ಯಾಯಿಕ ದಂಡಾಧಿಕಾರಿ ಚೇತನ್. ಎಸ್ .ಎಫ್ ಅವರು 5 ವರ್ಷ ಕಠಿಣ ಸಜೆ ಹಾಗೂ 5 ಸಾವಿರ ರೂ. ದಂಡ ವಿಧಿಸಿದ್ದಾರೆ.
ಉಮಾನಾಥ ಪ್ರಭು(42) ಶಿಕ್ಷೆಗೆ ಗುರಿಯಾದಾತ. 2016 ಮಾರ್ಚ್ 28 ಹಾಗೂ 30ರ ನಡುವೆ ಕಳವು ಪ್ರಕರಣ ನಡೆದಿತ್ತು. ಮನೆಯ ಮುಂಭಾಗಿಲನ್ನು ಯಾವುದೋ ಮಾರಾಕಾಯುಧದಿಂದ ತೆರದು ಮನೆಯೊಳಗೆ ಅಕ್ರಮವಾಗಿ ನುಗ್ಗಿ, ಕೋಣೆಯಲ್ಲಿದ್ದ ಕವಾಟಿನ ಒಳಗೆ ಬಟ್ಟೆಯ ಬಾಕ್ಸ್ನಲ್ಲಿ ಇರಿಸಿದ್ದ ವಿವಿಧ ಮಾದರಿಯ ಚಿನ್ನಾಭರಣ ಒಟ್ಟು 26.700 ಗ್ರಾಂ ತೂಕದ ಚಿನ್ನಾಭರಣ ಹಾಗೂ ಐದು ಸಾವಿರ ನಗದು ಕಳವುಗೈಯಲಾಗಿತ್ತು.
ಈ ಕುರಿತು ಮನೆ ಮಾಲಕಿ ಯಶೋಧ ಅವರು ಕಾರ್ಕಳ ನಗರ ಠಾಣೆಗೆ ನೀಡಿ ದೂರಿನ್ವಯ ಅಂದಿನ ಠಾಣಾಧಿಕಾರಿ ರವಿ ಅವರು ಪ್ರಕರಣದ ದಾಖಲಿಸಿ ಆರೋಪಿ ಮಿಯ್ಯಾರು ಚರ್ಚ್ ಬಳಿಯ ಬಾಡಿಗೆ ಮನೆಯ ನಿವಾಸಿಯಾಗಿದ್ದ ಉಮಾನಾಥ ಪ್ರಭು ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದಲ್ಲದೇ , ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯವು ವಾದ -ಪ್ರತಿವಾದಗಳನ್ನು ಆಲಿಸಿ, ಪ್ರಕರಣದಲ್ಲಿ ಆರೋಪಿತನಾಗಿದ್ದ ಉಮಾನಾಥ ಪ್ರಭು(42) ಅಪರಾಧಿ ಎಂದು ತೀರ್ಪು ನೀಡಿ ಶಿಕ್ಷೆ ಪ್ರಮಾಣವನ್ನು ವಿಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಉಮಾನಾಥ ಪ್ರಭುವಿಗೆ ಒಟ್ಟು 5 ವರ್ಷ ಕಠಿಣ ಸಜೆ ಹಾಗೂ 5 ಸಾವಿರ ದಂಡವಿಧಿಸಿ ತೀರ್ಪು ನೀಡಲಾಗಿದೆ.
ಈ ಹಿಂದೆ ಕಳವು ಪ್ರಕರಣವೊಂದರಲ್ಲಿ ಅಪರಾಧಿ ಉಮಾನಾಥ ಪ್ರಭುಗೆ ಶಿಕ್ಷೆಯೂ ಆಗಿತ್ತು. ಸರಕಾರಿ ಸಹಾಯಕ ಅಭಿಯೋಜಕಿ ಶೋಭಾ ಮಹದೇವ ನಾಯಕ್ ಸರಕಾರದ ಪರವಾಗಿ ವಾದಿಸಿದ್ದಾರೆ.